ಲಕ್ನೋ: ಕಾನೂನುಬಾಹಿರವಾಗಿ ಧರ್ಮ ಪರಿವರ್ತನೆಯಾಗುವುದನ್ನು ನಿಷೇಧಿಸಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ದೇಶಾದ್ಯಂತ 224 ನಿವೃತ್ತ ಅಧಿಕಾರಿಗಳು ಬೆಂಬಲಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಯೋಗಿ ಸರ್ಕಾರವು ಕಳೆದ ವರ್ಷ 2020 ರಲ್ಲಿ ಬಲವಂತದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿತು. ದುರಾಸೆ, ಮೋಸ ಅಥವಾ ಪಿತೂರಿಯಿಂದ ಬಲವಂತವಾಗಿ ಮತಾಂತರಗೊಳಿಸುವುದನ್ನು ತಡೆಯುವುದು ಇದರ ಉದ್ದೇಶ.
ಸಿಕ್ಕಿಂ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್, ಮಾಜಿ ಪಂಜಾಬ್ ಡಿಜಿಪಿ ಪಿಸಿ ಡೋಗ್ರಾ, ಪಂಜಾಬ್ ಮಾಜಿ ಮುಖ್ಯ ಕಾರ್ಯದರ್ಶಿ ಸರ್ವೇಶ್ ಕೌಶಲ್, ತ್ರಿಪುರ ಮಾಜಿ ಡಿಜಿಪಿ ಬಿ.ಎಲ್.ಬೋಹ್ರಾ, ರಾಷ್ಟ್ರೀಯ ವಸ್ತುಸಂಗ್ರಹಾಲಯದ ಮಾಜಿ ಮಹಾನಿರ್ದೇಶಕ ಡಾ. ಬಿ.ಆರ್.ಮಣಿ, ಯು.ಪಿ.ಯ ಮಾಜಿ ಡಿಜಿ ಮಹೇಂದ್ರ ಮೋದಿ, ಕೆಜಿಎಂಯು ಲಕ್ನೋ ಮಾಜಿ ಉಪಕುಲಪತಿ, ಎಂಎಲ್ಬಿ ಭಟ್, ರಾಷ್ಟ್ರೀಯ ಪುನರ್ವಸತಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಶಕುಂತಲಾ ಮಿಶ್ರಾ, ಬಿ.ಎಚ್‌ಯು ಮಾಜಿ ಉಪಕುಲಪತಿ ಗಿರೀಶ್ ಚಂದ್ರ ಸುಗ್ರೀವಾಜ್ಞೆಯನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಾಯಕತ್ವ ಶ್ಲಾಘಿಸಿದ ಬಿಲ್ ಗೇಟ್ಸ್
ಆದರೆ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ಪ್ರಧಾನಿ ಸಲಹೆಗಾರ ಪಿ.ಕೆ.ನಾಯರ್, ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಈ ಸುಗ್ರೀವಾಜ್ಞೆಯನ್ನು ಟೀಕಿಸಿದ್ದಾರೆ. ಮತಾಂತರ ವಿರೋಧಿ ಕಾನೂನು ರಾಜ್ಯವನ್ನು ದ್ವೇಷ ಮತ್ತು ಧರ್ಮಾಂಧತೆಯ ರಾಜಕೀಯದ ಕೇಂದ್ರವನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.