ನವದೆಹಲಿ: ದೇಶಾದ್ಯಂತ ಹೇರಿಕೆ ಮಾಡಲಾಗಿರುವ ನಾಲ್ಕನೇ ಹಂತದ ಲಾಕ್ಡೌನ್ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಇಂದಿನಿಂದ ದೇಶಾದ್ಯಂತ 200 ರೈಲು ಸಂಚಾರ ಆರಂಭ ಮಾಡಲಿವೆ. ಈಗಾಗಲೇ ದೇಶದಲ್ಲಿ ವಿಶೇಷ ರೈಲು ಹಾಗೂ ಶ್ರಮಿಕ್ ರೈಲು ಸಂಚಾರ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಈ ರೈಲುಗಳ ಪ್ರಯಾಣ ಆರಂಭಗೊಳ್ಳಲಿದೆ.
ಮೊದಲ ದಿನವೇ 200 ರೈಲಿನಲ್ಲಿ 1.45 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದು, ರೈಲು ಹೊರಡುವುದಕ್ಕೂ ಮುಂಚಿತವಾಗಿ 90 ನಿಮಿಷಗಳ ಕಾಲ ನಿಲ್ದಾಣದಲ್ಲಿರುವಂತೆ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಈ ವೇಳೆ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ, ಮಾಸ್ಕ್, ಸ್ಕ್ರೀನಿಂಗ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.
ಮನೆಯಿಂದಲೇ ಆಹಾರ ಮತ್ತು ನೀರು ತರುವಂತೆ ಸೂಚನೆ ನೀಡಲಾಗಿದ್ದು, ಪ್ರಮುಖವಾಗಿ ಮುಂಬೈ ಸಿಎಸ್‌ಟಿಯಿಂದ ಗದಗ, ಮುಂಬೈ ಸಿಎಸ್‌ಟಿಯಿಂದ ಕೆಎಸ್‌ಆರ್ ಬೆಂಗಳೂರು, ದಾಣಾಪುರದಿಂದ ಕೆಎಸ್‌ಆರ್ ಬೆಂಗಳೂರು, ಹೌರಾದಿಂದ ಯಶವಂತಪುರ ವರಗೆ ದುರಂತೊ, ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಯಶವಂತಪುರದಿಂದ ಶಿವಮೊಗ್ಗ ಗಮ್ಯಸ್ಥಾನಗಳಿಗೆ ಜನಶತಾಬ್ದಿ ರೈಲು ಪ್ರಯಾಣ ಬೆಳೆಸಲಿವೆ. ಜೂನ್ 30ರವರೆಗೆ ಸುಮಾರು 26 ಲಕ್ಷ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದು, ಎಸಿ ಹಾಗೂ ನಾನ್ ಎಸಿ ರೈಲುಗಳು ಇವಾಗಿವೆ.
ಪ್ರಮುಖ ಮಾಹಿತಿ!
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರತಿ ದಿನ ರೈಲು ಸಂಚಾರ ಇರಲಿದ್ದು, ಅದೇ ರೀತಿ ಮುಂಬೈನಿಂದ ಗದಗಕ್ಕೆ ಮತ್ತು ಗದಗದಿಂದ ಮುಂಬೈಗೂ ಪ್ರತಿ ದಿನ ರೈಲು ಸಂಚಾರ ಮಾಡಲಿದೆ.
ಗದಗದಿಂದ ಮುಂಬೈಗೆ ತೆರಳುವ ರೈಲು ಜೂ.2ರಂದು ಆರಂಭಗೊಳ್ಳಲಿದೆ. ಯಶವಂತಪುರದಿಂದ ಜೂ.2ರಿಂದ ಆರಂಭವಾಗುವ ನಿಜಾಮುದ್ದೀನ್ ಎಕ್ಸ್ಪ್ರೆಸ್ ವಾರದಲ್ಲಿ ಮಂಗಳವಾರ, ಗುರುವಾರ ಸಂಚರಿಸಲಿದೆ.
ನಿಜಾಮುದ್ದೀನ್‍ನಿಂದ ಜೂ.5ರಿಂದ ಸಂಚಾರ ಆರಂಭ ಮಾಡಲಿದ್ದು, ಇದು ಬುಧವಾರ, ಶುಕ್ರವಾರ ಸಂಚರಿಸಲಿದೆ. ಹುಬ್ಬಳ್ಳಿ ನಿಜಾಮುದ್ದೀನ್ ಹೊರಡುವ ರೈಲು ಜೂ.1ರಿಂದ ದಿನಪ್ರತಿ ಹಾಗೂ ನಿಜಾಮುದ್ದೀನ್‍ನಿಂದ ಹುಬ್ಬಳ್ಳಿಗೆ ಬರುವ ರೈಲು ಜೂ.3ರಿಂದ ಸೇವೆ ಆರಂಭಿಸಲಿದೆ.