ನವದೆಹಲಿ: ಜಪಾನ್ ವಿದೇಶಾಂಗ ವ್ಯವಹಾರಗಳ ಸಚಿವ ತೋಶಿಮಿಟ್ಸು ಮೊಟೆಗಿ ಮತ್ತು ರಕ್ಷಣಾ ಸಚಿವ ತಾರೊ ಕೊನೊ ಅವರು ಶನಿವಾರ ಬೆಳಿಗ್ಗೆ ಭಾರತಕ್ಕೆ ಆಗಮಿಸಲಿದ್ದು, 'ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವ ಸಂವಾದ'ದ (2+2) ಉದ್ಘಾಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ನಾಳೆ ಬೆಳಗ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದು, ಸಂಜೆ ವೇಳೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ. '2+2 ಸಂವಾದ'ದ ಉದ್ಘಾಟನಾ ಸಭೆಯಲ್ಲಿ ಜಪಾನ್ನ ಈ ಇಬ್ಬರು ಸಚಿವರು ತಮ್ಮ ದೇಶದ ನಿಯೋಗವನ್ನು ಮುಂದಿಡಲಿದ್ದು, ಭಾರತದ ನಿಯೋಗದ ನೇತೃತ್ವವನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜೈಶಂಕರ್ ವಹಿಸಲಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಭದ್ರತೆ ಹಾಗೂ ರಕ್ಷಣಾ ಸಹಕಾರವನ್ನು ಗಟ್ಟಿಗೊಳಿಸಲು 'ವಿದೇಶಿ ಮತ್ತು ರಕ್ಷಣಾ ಸಚಿವ ಸಂವಾದ'ವನ್ನು ಸ್ಥಾಪಿಸುವ ಉದ್ದೇಶದಿಂದ 2018 ರ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆದ 13 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಿಎಂ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ತೆಗೆದುಕೊಂಡ ನಿರ್ಧಾರವನ್ನು ಅನುಸರಿಸಿ ಈ ಸಭೆ ನಡೆಯುತ್ತಿದೆ.
2+2 ಸಭೆಯು 'ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವ'ಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು, ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಬಗ್ಗೆ ಹೆಚ್ಚಿನ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಗೆ ಒದಗಿಸಲಿದೆ.