ಜೈಪುರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯಮಸ್ವರೂಪಿಯಂತೆ ಬಂದ ಬೃಹದಾಕಾರದ ಕಬ್ಬಿಣದ ಪೈಪ್‍ವೊಂದು ಇಬ್ಬರ ರುಂಡ ಕತ್ತರಿಸಿದ ಘಟನೆ ರಾಜಸ್ಥಾನದ ಪಾಲಿಯಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದ್ದು ಪೈಪ್ ಹಾಸು ಹೊಕ್ಕಿದ್ದರಿಂದ ಓರ್ವ ಮಹಿಳೆ ಸೇರಿದಂತೆ ಇಬ್ಬರ ಕತ್ತು ಸೀಳಿದೆ. ಪಕ್ಕದಲ್ಲಿ ಕುಳಿತಿದ್ದ ಹಲವು ಪ್ರಯಾಣಿಕರೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
100 ಅಡಿ ಉದ್ದ ಮತ್ತು 2 ಅಡಿ ಅಗಲದ ಕಬ್ಬಿಣದ ಪೈಪ್ ಇದಾಗಿದ್ದು ಒಂದು ಕಿಟಕಿಯಿಂದ ಮತ್ತೊಂದು ಕಿಟಕಿಗೆ ಹಾಸು ಹೊಕ್ಕಿದೆ. ಬಸ್ನ ವೇಗದ ಜೊತೆಗೆ ಪೈಪ್ ಹಾಗೆ ತಳ್ಳಿಕೊಂಡು ಹೋಗಿದ್ದರಿಂದ ಇಬ್ಬರ ರುಂಡ ಕತ್ತರಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿ ಜಿಲ್ಲೆಯ ಸಂದೇರವ್ ಗ್ರಾಮದ ನಾಲ್ಕು ಪಥದ ಜೈಪುರ - ಅಹಮದಾಬಾದ್ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಈ ದುರಂತ ಸಂಭವಿಸಿದೆ. ಹೆದ್ದಾರಿಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸುತ್ತಿತ್ತು. ಈ ವೇಳೆ ಆ ಪೈಪ್ ಅನ್ನು ಹೈಡ್ರೊ ಮೆಷಿನ್‌ಗೆ ನೇತುಹಾಕಿದ್ದಾಗ ವೇಗವಾಗಿ ಬಂದ ಬಸ್ ಇದಕ್ಕೆ ಗುದ್ದಿದೆ. ಪರಿಣಾಮ ಇಬ್ಬರ ಕತ್ತು ಸೀಳಿ ಹೊರ ಬಂದಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆಂಡತಿ ಕತ್ತು ಹಿಸುಕಿ ಕೊಲೆ ಶಂಕೆ: ಪತಿ ಪರಾರಿ
ಮರ್ವಾಡ್ ಜಂಕ್ಷನ್‌ನ ಐಸಾಲಿ ಗ್ರಾಮದ ನಿವಾಸಿಗಳಾದ ಮೈನಾ ದೇವಿ ದೇವಾಸಿ ಮತ್ತು ಭನ್ವರ್ಲಾಲ್ ಪ್ರಜಾಪತ್ ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಶವಗಳನ್ನು ಶವಾಗಾರದಲ್ಲಿ ಇಡಲಾಗಿದ್ದು, ಮೃತ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ಬಸ್ ಮಾಲೀಕ ಸೇರಿದಂತೆ ಜಿಎಂ ಗೋಲ್ಡನ್ ಎಂಬ ಖಾಸಗಿ ಕಂಪನಿಯ ವಿರುದ್ಧ ಈ ಬಗ್ಗೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.