ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 17ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.
ನಿನ್ನೆ ಸರ್ವಪಕ್ಷ ಸಭೆ ನಡೆಸಿದ ಪ್ರಧಾನಿ ಮೋದಿ, ಸುಗಮ ಕಲಾಪಕ್ಕೆ ಸಹಕರಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಇಂದಿನಿಂದ ಜುಲೈ 26ರವರೆಗೆ ನಡೆಯುವ ಅಧಿವೇಶನದ ಮೊದಲ 2 ದಿನವನ್ನು ಸಂಸದರ ಪ್ರಮಾಣ ವಚನಕ್ಕೆ ಮೀಸಲಿಡಲಾಗಿದೆ.
ಈ ಬಾರಿ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಸೇರಿದಂತೆ ಹಲವು ಮಸೂದೆಗಳ ಅಂಗೀಕಾರಕ್ಕೆ ಸರ್ಕಾರ ಮನವಿ ಮಾಡಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳು ಸೋಲು ಅನುಭವಿಸಿದ್ದು, ಬರೋಬ್ಬರಿ 300 ಚೊಚ್ಚಲ ಸಂಸದರು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದಾರೆ.
ಇತ್ತ ಅಧಿವೇಶನದಲ್ಲಿ ಮೊದಲ ದಿನ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಪ್ರತಿಪಕ್ಷ ಇನ್ನೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ಇದರ ಜೊತೆಗೆ ಕಾಂಗ್ರೆಸ್ ತನ್ನ ವಿಪಕ್ಷ ನಾಯಕನನ್ನು ಇನ್ನೂ ಘೋಷಿಸಿಲ್ಲ.