ನವದೆಹಲಿ: 17ನೇ ಲೋಕಸಭೆ ಅಧಿವೇಶನದಲ್ಲಿ ಬರೋಬ್ಬರಿ 30+ ವಿವಿಧ ಮಸೂದೆಗಳು ಅಂಗೀಕಾರಗೊಂಡಿವೆ. 1952ರ ಲೋಕಸಭೆ ಅಧಿವೇಶನದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಬಿಲ್ ಪಾಸ್ ಆಗಿದ್ದು ದಾಖಲೆ ನಿರ್ಮಾಣವಾಗಿದೆ.
1952ರಲ್ಲಿ 64 ದಿನಗಳ ಕಾಲ ನಡೆದ ಅಧಿವೇಶನದಲ್ಲಿ 27 ಮಸೂದೆಗಳು ಪಾಸ್ ಆಗಿದ್ದವು. ಆದರೆ ಈ ಸಲದ ಲೋಕಸಭೆಯಲ್ಲಿ ಈಗಾಗಲೇ 30 ಮಸೂದೆಗಳು ಪಾಸ್ ಆಗಿದ್ದು, ಇನ್ನು ಮೂರು ದಿನಗಳ ಅಧಿವೇಶನ ಬಾಕಿ ಇರುವುದರಿಂದ ಕೆಲ ಬಿಲ್‌ಗಳಿಗೆ ಕೆಳಮನೆಯ ಒಪ್ಪಿಗೆ ಸಿಗುವುದು ಖಚಿತವಾಗಿದೆ.
ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ತ್ರಿವಳಿ ತಲಾಖ್, ವಾಹನ ತಿದ್ದುಪಡಿ ಕಾಯ್ದೆ ತಿದ್ದುಪಡಿ ಮಸೂದೆ, ಆರ್ಟಿಐ, ಯುಎಪಿಎ ಸೇರಿದಂತೆ ಅನೇಕ ಬಿಲ್ ಪಾಸ್ ಆಗಿವೆ. ಇದರ ಜತೆಗೆ ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆ(ತಿದ್ದುಪಡಿ) ವಿಧೇಯಕ 2019, ಜಲಿಯನ್‌ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ(ತಿದ್ದುಪಡಿ) ವಿಧೇಯಕ 2019, ಅಣೆಕಟ್ಟು ಸುರಕ್ಷತೆ ವಿಧೇಯಕ 2019 ಹಾಗೂ ಭಾರತೀಯ ವಿಮಾನ ನಿಲ್ದಾಣದ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2019 ಲೋಕಸಭೆಯ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಎನ್ಡಿಎ ಮೈತ್ರಿಕೂಟ ಒಟ್ಟು 352 ಸಂಸದರನ್ನು ಲೋಕಸಭೆಯಲ್ಲಿ ಹೊಂದಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ 91 ಸಂಸದರನ್ನೊಳಗೊಂಡಿದೆ. ಆದರೆ ರಾಜ್ಯಸಭೆಯಲ್ಲಿ ಎನ್ಡಿಎ ಹೆಚ್ಚಿನ ಸದಸ್ಯರನ್ನು ಹೊಂದಿಲ್ಲ.