ಹಿಸ್ಸಾರ್ (ಹರಿಯಾಣ): ಜೈಲು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಸುಮಾರು 17 ಬಾಲಾಪರಾಧಿಗಳು ವೀಕ್ಷಣಾ ಕೇಂದ್ರದಿಂದ ಪರಾರಿಯಾಗಿರುವ ಘಟನೆ ಹರಿಯಾಣದ ಹಿಸ್ಸಾರ್ ಜಿಲ್ಲೆಯ ಖಾಸಗಿ ಕಾರಾಗೃಹದಲ್ಲಿ ನಡೆದಿದೆ.
ವಿವಿಧ ಪ್ರಕರಣಗಳ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಬಾಲಾಪರಾಧಿಗಳನ್ನು ವೀಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದ್ದು, ಮೊದಲೇ ಸಂಚು ರೂಪಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸಂಜೆ ಆರು ಗಂಟೆಗೆ ಊಟ ನೀಡಲು ಹೋದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ವೇಳೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಎಸ್ಹೆಚ್ಒ ಮನೋಜ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ವೀಕ್ಷಣಾ ಕೇಂದ್ರದಲ್ಲಿ ಸುಮಾರು 97 ಮಂದಿಯಿದ್ದು, ಪರಾರಿಯಾದ 17 ಅಪರಾಧಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಹಿಸ್ಸಾರ್ ಜಿಲ್ಲೆಯ ಗಡಿಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಹಾಗೂ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
2017ರ ಜೂನ್ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವಿಚಾರಣಾ ಹಂತದಲ್ಲಿದ್ದ 6 ಮಂದಿ ಬಾಲಾಪರಾಧಿಗಳು ಪರಾರಿಯಾಗಿದ್ದರು.