ಜೈಪುರ:ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ ಹಸಿರಾಗಿರುವಾಗಲೇ ಅಪ್ರಾಪ್ತನೊಬ್ಬ ತನ್ನದೇ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಅಲ್ವಾರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 15 ವರ್ಷದ ಹುಡುಗನೊಬ್ಬ ಗೆಳೆಯರೊಂದಿಗೆ ಸೇರಿ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಡುಗಿಯ ಮನೆಯವರು ತಮ್ಮ ಮಗನನ್ನು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಬಾಲಕನ ಕುಟುಂಬ ದೂರು ನೀಡಿದೆ ಎಂದು ಎಸ್ಪಿ ಪರೀಶ್ ಅನಿಲ್ ದೇಶ್ಮುಖ್ ಮಾಹಿತಿ ನೀಡಿದ್ದಾರೆ.
ಹರ್ನಾಸ್ ಕಿ ಧಾನಿ ಎಂಬಲ್ಲಿ ತಮ್ಮ ಮಗ ಸಂಬಂಧಿಕರ ಮದುವೆಗೆ ತೆರಳಿದ್ದಾಗ ಈ ಹುಡುಗಿ ಕಡೆಯವರು ಹೊಡೆದು, ಕೊಲೆ ಮಾಡಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಆದರೆ ಸಂತ್ರಸ್ತೆ ಕುಟುಂಬ, ಇದೇ ಮದುವೆ ಸಂದರ್ಭದಲ್ಲಿ ಈ ಬಾಲಕ ಹಾಗೂ ಮತ್ತವನ ಇಬ್ಬರು ಸ್ನೇಹಿತರು ತಮ್ಮ ಮಗಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾರೆ. ಈ ಮೂವರೊಂದಿಗೆ ತಮ್ಮ ಮಗಳು ಪತ್ತೆಯಾದಾಗ ಒಬ್ಬ ಆರೋಪಿ ಸಿಕ್ಕಿಬಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ.
ಪ್ರಕರಣದ ಸಂಬಂಧ ಮೃತ ಬಾಲಕನ ಹೊರತಾಗಿ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿ,ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ಅವರಿಬ್ಬರು ಬಾಲಾಪರಾಧಿಗಳ ಕಾರಾಗೃಹದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿ ಐದು ಅತ್ಯಾಚಾರ ಪ್ರಕರಣಗಳು ರಾಜಸ್ಥಾನದಲ್ಲಿ ಇತ್ತೀಚೆಗೆ ವರದಿಯಾಗಿವೆ.