ಹೈದರಾಬಾದ್: ಲಾಕ್ಡೌನ್ನಿಂದ ಅನ್ಯ ಮಾರ್ಗವಿಲ್ಲದೇ ಕಾಲ್ನಡಿಗೆ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರು ರಸ್ತೆ ಅಪಘಾತಕ್ಕೆ ಒಳಗಾಗುತ್ತಿದ್ದಾರೆ.
ವಲಸೆ ಬಂದಿರುವ ಕೂಲಿ ಕಾರ್ಮಿಕರು ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ಆಯಾ ಪ್ರಾಂತ್ಯಗಳಲ್ಲೇ ಸಿಲುಕಿಕೊಂಡು ನರಕ ಅನುಭವಿಸುತ್ತಿದ್ದಾರೆ. ದುಡಿಯಲು ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ. ಹೀಗಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಹೀಗಾಗಿ ತವರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ವಿಧಿಯಾಟ ಮಾರ್ಗ ಮಧ್ಯದಲ್ಲೇ ಅಸುನೀಗುತ್ತಿದ್ದಾರೆ.
ಮೊದಲ ಬಾರಿಗೆ ಲಾಕ್ಡೌನ್ ಹೇರಿದ ಮಾರ್ಚ್ 24ರಿಂದ ಮೇ.3ರವರೆಗೂ ದೇಶಾದ್ಯಂತ 140ಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸೇವ್ ಲೈಫ್ ಫೌಂಡೇಷನ್ ವರದಿ ತಿಳಿಸಿದೆ.
ಫೌಂಡೇಷನ್ ವರದಿಯ ಪ್ರಕಾರ, ಅದರಲ್ಲಿ 42 ವಲಸಿಗರು ಟ್ರಕ್ಗಳಲ್ಲಿ ಮನೆಗೆ ಹೋಗುವಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಾವುಗಳು ಸಂಭವಿಸಿರುವ ಸಾಧ್ಯತೆ ಇದೆ. ಆದರೆ, ಕೆಲವು ರಾಜ್ಯಗಳು ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ ಎಂದು ಸಂಸ್ಥೆ ತಿಳಿಸಿದೆ.