ಸೂರತ್: ಋತುಚಕ್ರದ ಸಂದರ್ಭದಲ್ಲಿ ಐದು ದಿನಗಳ ಕಾಲ ಮಹಿಳೆಯರು ಸಂಕಷ್ಟ ಅನುಭವಿಸುತ್ತಾರೆ. ಹೆಂಗಳೆಯರ ಈ ಸಮಸ್ಯೆಯನ್ನು ಸೂರತ್ನ ಕಂಪನಿಯೊಂದು ಗಮನಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಸೌಲಭ್ಯವಾಗಿ ವಾರ್ಷಿಕ 12 ದಿನಗಳ "ಋತುಚಕ್ರ ರಜೆ" ಘೋಷಿಸಿದೆ.
ಮಹಿಳೆಯರು ತಮ್ಮ ಮುಟ್ಟಿನ ಸಂದರ್ಭದಲ್ಲಿ ತೀವ್ರ ನೋವು, ಭಾರೀ ರಕ್ತಸ್ರಾವ, ಚಿತ್ತಸ್ಥಿತಿಯ ಬದಲಾವಣೆ ಮತ್ತು ಸ್ತನ ನೋವನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳಿಂದಾಗಿ ಕೆಲಸ ನಿರ್ವಹಿಸಲು ಅಡ್ಡಿಯಾಗುತ್ತದೆ. ಕೆಲಸದ ಒತ್ತಡದಿಂದ ನೈರ್ಮಲ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ, ವಿಶ್ರಾಂತಿ ಇಲ್ಲದೆ ದುಡಿಯಬೇಕಾಗುತ್ತದೆ. ಇತ್ತೀಚೆಗೆ ಮಹಿಳೆಯರಿಗೆ ಪರಿಹಾರದಂತೆ ಆಹಾರ ಉತ್ಪಾದನಾ ಕಂಪನಿಯು 10 ದಿನಗಳ "ಋತುಚಕ್ರ ರಜೆ" ಘೋಷಿಸಿತ್ತು. ಇದೀಗ ಸೂರತ್ನ ಐವಿಪನಾನ್ ಕಂಪನಿಯು ಮಹಿಳೆಯರಿಗೆ 12 ದಿನಗಳ "ಋತುಚಕ್ರ ರಜೆ" ಘೋಷಿಸಿದೆ. ಈ ರಜೆಯನ್ನು ಋತುಚಕ್ರ ಸಂದರ್ಭದ 5 ದಿನಗಳಲ್ಲಿ ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದಾಗಿದೆ.
ಕಂಪನಿಯ ಮಾಲೀಕ ಭೌತಿಕ್ ಶೆತ್ ಮಾತನಾಡಿದ್ದು, "ನಾನು ಆಹಾರ ಕಂಪನಿಯೊಂದು ಪಿರಿಯಡ್ ರಜೆ ಘೋಷಿಸಿರುವ ಬಗ್ಗೆ ಕೇಳಿದ್ದೆ. ಆದ್ದರಿಂದ ನಮ್ಮ ಕಂಪನಿಯ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಪಿರಿಯಡ್ ರಜೆ ನೀಡಲು ನಿರ್ಧರಿಸಿದ್ದೇವೆ. ಅವರು ರಜೆ ತೆಗೆದುಕೊಳ್ಳಬಹುದು ಅಥವಾ ಅವರು ಮನೆಯಿಂದ ಕೆಲಸ ಮಾಡಬಹುದು. ಕೆಲಸದ ವಾತಾವರಣವು ಮಾನವ ಸ್ನೇಹಿಯಾಗಿರಬೇಕು. ಮಹಿಳೆಯರು ಆರೋಗ್ಯ ಮತ್ತು ಸಂತೋಷ ಅನುಭವಿಸುವುದು ನಮ್ಮ ಗುರಿಯಾಗಿದೆ. ಈ ಅವಧಿಯಲ್ಲಿ ಅವರು ಕಷ್ಟಗಳನ್ನು ಎದುರಿಸುತ್ತಾರೆ. ಮನಸ್ಥಿತಿ ಬದಲಾವಣೆ ಮತ್ತು ದೈಹಿಕ ಅಸ್ವಸ್ಥತೆಗಳು ಉಂಟಾಗುತ್ತವೆ ಎಂದು ನಮಗೆ ತಿಳಿದಿದೆ" ಎಂದಿದ್ದಾರೆ.
ಉದ್ಯೋಗಿ ರೇಷ್ಮಾ ಎಂಬುವರು ಮಾತನಾಡಿ, "ಎಲ್ಲಾ ಮಹಿಳಾ ಸಿಬ್ಬಂದಿ ಕಂಪನಿಯ ನಿರ್ಧಾರದಿಂದ ಸಂತೋಷವಾಗಿದ್ದಾರೆ. ಮಹಿಳೆಯರ ದೇಹದ ಸ್ಥಿತಿಗಳು ವಿಶಿಷ್ಟವಾಗಿವೆ ಮತ್ತು ಅವರಿಗೆ ವಿಭಿನ್ನ ಸಮಸ್ಯೆಗಳಿರುತ್ತದೆ. ಕೆಲವರು ದಿನವಿಡೀ ನೋವಿನಿಂದ ಬಳಲುತ್ತಾರೆ. ಇನ್ನೂ ಕೆಲವರಿಗೆ ಒಂದು, ಎರಡು ದಿನ ನೋವು ಇರುತ್ತದೆ. ಮಹಿಳೆಗೆ ಹೆಚ್ಚು ಸಮಯದವರೆಗೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು ಮತ್ತು ಕುಳಿತುಕೊಳ್ಳುವುದು ಕಷ್ಟಕರ. ಈ ನಿರ್ಧಾರವು ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಪರಿಹಾರ ನೀಡಿದೆ" ಎಂದಿದ್ದಾರೆ.