ನವದೆಹಲಿ: ಉತ್ತರ ಭಾರತದ 12 ನಗರಗಳಲ್ಲಿ ವಾಯುಮಾಲಿನ್ಯವು ಗಂಭೀರ ಮಟ್ಟವನ್ನು ತಲುಪಿದ್ದು, ಅಕ್ಷರಶ ಉಸಿರಾಡಲು ಯೋಗ್ಯವಲ್ಲದ ವಾತಾವರಣ ಸೃಷ್ಟಿಯಾಗಿದೆ.
ಗುರುವಾರದ ವಾಯುಮಾಲಿನ್ಯ ಗುಣಮಟ್ಟ ನಿಯಂತ್ರಣ (ಎಕ್ಯೂಆರ್) ಮಾಪನದ ಅನ್ವಯ, ದೆಹಲಿ ಸೇರಿ 12 ನಗರಗಳ ಮಾಲಿನ್ಯದ ಮಟ್ಟವು 400 ಮತ್ತು ಇದಕ್ಕೂ ಅಧಿಕ ಮಟ್ಟದಲ್ಲಿ ವ್ಯಾಪಿಸಿದೆ ಎಂದು ವಾಯುಮಾಲಿನ್ಯ ಗುಣಮಟ್ಟ ನಿಯಂತ್ರಣ ಮಂಡಳಿ ಎಚ್ಚರಿಸಿದೆ. ರಾಷ್ಟ್ರ ರಾಜಧಾನಿ- ಎನ್ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿ ಯಿಂದ ಸುಪ್ರೀಂಕೋರ್ಟ್ ವಾಯು ನಿಯಂತ್ರಣ ಮಂಡಳಿ ಸಾರ್ವಜನಿಕರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಎಕ್ಯೂಐ ಮಾಹಿತಿ ಪ್ರಕಾರ, ಗ್ರೇಟರ್ ನೋಯ್ಡಾ (473), ಹಾಪುರ್ (477), ಕೈತಾಲ್ (463), ಮೀರತ್ (459), ಬುಲಂದ್‌ಶಹರ್ (453), ನೋಯ್ಡಾ (452), ಕಾನ್ಪುರ್ (432), ಕುರುಕ್ಷೇತ್ರ (418), ಮತ್ತು ದೆಹಲಿ (410) ಎಕ್ಯೂಐ ಪ್ರಮಾಣ ಹೊಂದಿವೆ.
ಕೈಗಾರಿಕಾ ಮಾಲಿನ್ಯ ಮತ್ತು ತ್ಯಾಜ್ಯ ಸುಡುವಿಕೆಯಿಂದಾಗಿ ನೋಯ್ಡಾ ಮತ್ತು ಗಾಜಿಯಾಬಾದ್‌ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದ ಎಕ್ಯೂಐ ಕಂಡುಬಂದಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್‌ಇ) ವಾಯು ಮಾಲಿನ್ಯ ನಿಯಂತ್ರಣ ಘಟಕದ ಕಾರ್ಯಕ್ರಮ ವ್ಯವಸ್ಥಾಪಕ ವಿವೇಕ್ ಚಟ್ಟೋಪಾಧ್ಯಾಯ ಹೇಳಿದರು.