ತಿರುವನಂತಪುರಂ: ಕೊರೊನಾ ವೈರಸ್ ಸೋಂಕು ಮುಸ್ಲಿಮರ ವಾರ್ಷಿಕ ಹಜ್ ಯಾತ್ರೆ ಮತ್ತು ಉಮ್ರಾ ಮೇಲೂ ಪರಿಣಾಮ ಬೀರಿದೆ. ಮೆಕ್ಕಾ ಮತ್ತು ಮದೀನಾ ಭೇಟಿಗೆ ವಿದೇಶಿ ಪ್ರವಾಸಿಗರಿಗೆ ಸೌದಿ ಅರೇಬಿಯಾ ತಾತ್ಕಾಲಿಕ ನಿಷೇಧ ಹೇರಿದ್ದು ಕೇರಳದ 10,000ಕ್ಕೂ ಹೆಚ್ಚು ಹಜ್ ಯಾತ್ರಿಗಳನ್ನು ಆತಂಕಕ್ಕೀಡುಮಾಡಿದೆ.
ವಿಶ್ವದಾದ್ಯಂತ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಮೆಕ್ಕಾ ಮತ್ತು ಮದೀನಾ ಭೇಟಿಗೆ ನಿಷೇಧ ಹೇರಿರುವ ಸೌದಿ ಅರೇಬಿಯಾ ಸರ್ಕಾರ, ಯಾತ್ರಾಸ್ಥಳಕ್ಕೆ ಆಗಮಿಸುವವರ ವೀಸಾಗಳನ್ನು ರದ್ದು ಮಾಡಿದೆ.
ಈ ಕುರಿತಾಗಿ ಕೇರಳ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಸಿ.ಮುಹಮ್ಮದ್ ಫೈಜಿ ಮಾಹಿತಿ ನೀಡಿದ್ದು, ಈ ವರ್ಷ ಕೇರಳದಲ್ಲಿ 10,000ಕ್ಕೂ ಹೆಚ್ಚು ಜನರನ್ನು ಹಜ್ ಯಾತ್ರೆಗೆ ತೆರಳಲಿದ್ದಾರೆ. ಆದರೆ ಮಾರಣಾಂತಿಕ ವೈರಸ್ ಭೀತಿಯಿಂದ ಸೌದಿ ಅರೇಬಿಯಾ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಿದೆ. ಹಜ್ ಯಾತ್ರೆಯ ಸಮಯದಲ್ಲಿ ಈ ನಿರ್ಬಂಧ ತೆರವಾಗುವ ವಿಶ್ವಾಸವಿದೆ ಎಂದು ಹೇಳಿದರು.