ವಯನಾಡ, ಕೇರಳ : ಸಾಧನೆ ಯಾರ ಸ್ವತ್ತೂ ಅಲ್ಲ. ಎಷ್ಟೇ ಕಷ್ಟಗಳಿದ್ದರೂ ಗುರಿ ಸ್ಪಷ್ಟವಾಗಿದ್ದು, ಅದನ್ನ ಸಾಧಿಸಿಯೇ ತೀರುವೆ ಎಂಬ ಛಲ ಇದ್ರೇ ಎಲ್ಲವೂ ಸಾಧ್ಯ. ಜೋಪಡಿಯಲ್ಲಿರುವ ಬುಡಕಟ್ಟು ಜನಾಂಗದ ಹುಡುಗಿಯೊಬ್ಬಳು ಈಗ ಇಡೀ ಕೇರಳವೇ ಹೆಮ್ಮೆಯಿಂದ ಬೀಗುವಂತೆ ಸಾಧನೆ ಮಾಡಿದ್ದಾಳೆ.
UPSC ಪಾಸಾದ ಮೊದಲ ಬುಡಕಟ್ಟು ಜನಾಂಗದ ಯುವತಿ :
ಶ್ರೀಧನ್ಯಾ ಸುರೇಶ್. ಯುಪಿಎಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಗಿಟ್ಟಿಸಿದ್ದಾರೆ. ಯುಪಿಎಸ್‌ಸಿ ಪಾಸ್ ಮಾಡಿದ ಕೇರಳ ಆದಿವಾಸಿ ಜನಾಂಗದಿಂದ ಮೊದಲ ಯುವತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಯನಾಡ ಜಿಲ್ಲೆಯ ಪೊಜುಥಾನಾ ಬಳಿಯ ಇದಿಯಾಮವಯಾಲ ಗ್ರಾಮದ ಶ್ರೀಧನ್ಯಾ ದೊಡ್ಡ ಶ್ರೀಮಂತ ಕುಟುಂಬದವರೇನಲ್ಲ. ತಂದೆ ಸುರೇಶ್ ಹಾಗೂ ತಾಯಿ ಕಮಲಾ ಈಗಲೂ ಹಳ್ಳಿಯಲ್ಲಿ ಕೂಲಿ ಮಾಡಿಯೇ ಬದುಕುತ್ತಿದ್ದಾರೆ. ವಯನಾಡ ಜಿಲ್ಲೆಯ 2ನೇ ಅತೀ ದೊಡ್ಡ ಆದಿವಾಸಿ ಜನಾಂಗದ ಕುರುಚಿಯಾ ಸಮುದಾಯಕ್ಕೆ ಸೇರಿದ ಬಡ ಹುಡುಗಿ ಶ್ರೀಧನ್ಯಾ ಯುಪಿಎಸ್‌ಸಿ ಪಾಸ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಯೂ ಡನ್ ವೆರಿ ವೆಲ್.. ಎಂದ ಎಐಸಿಸಿ ಅಧ್ಯಕ್ಷ ರಾಹುಲ್:
ನಿನ್ನೆ 2018ರ ಯುಪಿಎಸ್‌ಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಶ್ರೀಧನ್ಯಾರಿಗೆ ಶುಭಾಶಯಗಳ ಮಹಾಪೂರವೇ ಹರಿದಿದೆ. ಮುಖ್ಯವಾಗಿ ಇದೇ ವಯನಾಡ ಜಿಲ್ಲೆಯಿಂದ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ, ಶ್ರೀಧನ್ಯಾರಿಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ. U Done Very Well ಅಂತಾ ಯುವತಿ ಸಾಧನೆಯನ್ನ ಕೊಂಡಾಡಿದ್ದಾರೆ. ವಿಶೇಷ ಅಂದ್ರೇ ರಾಹುಲ್ ಗಾಂಧಿ ಫೋನ್ ಮಾಡ್ತಾರೆಂಬ ನಿರೀಕ್ಷೆಯಿಟ್ಕೊಂಡಿದ್ದರಂತೆ ಶ್ರೀಧನ್ಯಾ. ಫೋನ್ ಮಾಡಿದಾಗ ಥ್ರಿಲ್ ಆಗಿ ತಮ್ಮನ್ನ ಭೇಟಿಯಾಗಿ ಕೈಕುಲುವುದಾಗಿ ಹೇಳಿಕೊಂಡಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್, ರಿಸಲ್ಟ್ ಬಂದ ತಕ್ಷಣವೇ ಫೇಸ್‌ಬುಕ್‌ನಲ್ಲಿ ಶ್ರೀಧನ್ಯಾ ಸುರೇಶ್‌ಗೆ ಅಭಿನಂದಿಸಿದ್ದಾರೆ. 'ಸಾಮಾಜಿಕ ಸಮಸ್ಯೆಗಳನ್ನ ಎದುರಿಸುತ್ತಿರುವ ಬುಡಕಟ್ಟು ಸಮುದಾಯದಿಂದ ಬಂದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೊಡ್ಡ ಸಾಧನೆ ಮಾಡಿರುವ ಶ್ರೀಧನ್ಯಾ ಅವರಿಗೆ ಅಭಿನಂದನೆ' ಅಂತಾ ಎಫ್‌ಬಿನಲ್ಲಿ ಸಿಎಂ ಪಿಣರಾಯಿ ಬರೆದುಕೊಂಡಿದ್ದಾರೆ.
ವಯನಾಡ ಜಿಲ್ಲೆಯ ಜನರಿಗಿದು ಐತಿಹಾಸಿಕ ಕ್ಷಣ. ಆದಿವಾಸಿ ಸಮುದಾಯಕ್ಕೆ ಸೇರಿದ ಹುಡುಗಿಯೊಬ್ಬಳು ಕೇರಳದಲ್ಲಿ ಇದೇ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಮಾಡಿರುವುದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ. ಇದಿಯಾಮವಯಾಲ ಗ್ರಾಮದ ಶ್ರೀಧನ್ಯಾ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 410ನೇ ಸ್ಥಾನ ಪಡೆದಿದ್ದಾರೆ. ಎಲ್ಲರೂ ಆಕೆಗೆ ಅಭಿನಂದನೆ ಸಲ್ಲಿಸಿ ಅಂತಾ ರಾಜ್ಯ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವರಾದ ಕೆ.ಕೆ ಶೈಲಜಾ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪತ್ರಿಕೆ ಕೊಳ್ಳಲು, ಸಂದರ್ಶನಕ್ಕೆ ತೆರಳಲೂ ಹಣವಿರಲಿಲ್ಲ :
ಶ್ರೀಧನ್ಯಾರ ಹರಕುಮುರುಕು ಜೋಪಡಿಯಲ್ಲಿ ವಾಸವಿದ್ದಾರೆ. ತಂದೆ ಹಾಗೂ ತಾಯಿ ದಿನಗೂಲಿ ಮಾಡಿ ಮಗಳನ್ನ ಓದಿಸಿದ್ದಾರೆ. ಹಾಕಿಕೊಳ್ಳೋದಕ್ಕೂ ಬಟ್ಟೆಯಿರದಿದ್ದರೂ ಮಗಳ ಓದಿಗಾಗಿ ಬಿಡದೇ ದುಡಿದು ಅಷ್ಟೋ ಇಷ್ಟೋ ಹಣ ಹೊಂದಿಸಿ ಕೊಡ್ತಿದ್ದರಂತೆ. ಮುಖ್ಯಪರೀಕ್ಷೆ ಪಾಸಾಗಿ, ಯುಪಿಎಸ್‌ಸಿ ಸಂದರ್ಶನಕ್ಕೆ ಮಗಳನ್ನ ಕಳುಹಿಸಲು ಕೂಡ ಅಪ್ಪಅಮ್ಮನ ಬಳಿ ದುಡ್ಡೇ ಇರಲಿಲ್ಲ. ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ನಿತ್ಯ ಪತ್ರಿಕೆಗಳನ್ನ ಓದಬೇಕಿತ್ತು. ಆ ಪತ್ರಿಕೆಗಳನ್ನ ಖರೀದಿಸಲೂ ಕೂಡ ಹಣವಿರುತ್ತಿಲಿಲ್ಲ. ಆದರೆ, ಎಷ್ಟೇ ಕಷ್ಟ ಬಂದರೂ ಕನಸು ಕಾಣೋದನ್ನ ಬಿಡಲಿಲ್ಲ. ಅದನ್ನ ಈಡೇರಿಸಿಕೊಳ್ಳುವತ್ತಲೇ ಗಮನ ಹರಿಸಿದ್ದರಂತೆ ಶ್ರೀಧನ್ಯಾ.
ನನ್ನ ಹಳ್ಳಿಯೇ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ :
'ನಾನು ಕೇರಳ ರಾಜ್ಯದ ಅತೀ ಹಿಂದುಳಿದ ಜಿಲ್ಲೆಯವಳು. ನನ್ನದು ರಾಜ್ಯದ 2ನೇ ಅತೀ ದೊಡ್ಡ ಬುಡಕಟ್ಟು ಸಮುದಾಯ. ಆದರೆ, ಈವರೆಗೂ ಒಬ್ಬರೇ ಒಬ್ಬರು ಐಎಎಸ್ ಪಾಸಾಗೋದಿರಲಿ, ಪರೀಕ್ಷೆ ಕೂಡ ಎದುರಿಸಿರಲಿಲ್ಲ. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ನನ್ನ ಊರು ಸಾಕ್ಷಿ. ಇದೇ ನನ್ನೂರು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯ ನನ್ನದಾಗಿದೆ. ಆದಿವಾಸಿಗಳ ಸಮುದಾಯದಲ್ಲಿರುವ ಸಾಕಷ್ಟು ವ್ಯಕ್ತಿಗಳು ನಾನು ಈ ಸಾಧನೆ ಮಾಡಲು ಪ್ರೇರೇಪಿಸಿದ್ದಾರೆ. ನನ್ನ ಈ ಸಾಧನೆಯನ್ನ ಅವರಿಗೇ ಅರ್ಪಿಸಲು ಬಯಸುತ್ತೇನೆ. ಸಾಕಷ್ಟು ಸಂಕಷ್ಟಗಳನ್ನ ದಾಟಿಯೇ ನಾನು ಇವತ್ತು ಈ ಹಂತಕ್ಕೆ ಬಂದು ತಲುಪಿದ್ದೇನೆ. ನನಗೆ ಸಹಾಯ ನೀಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞೆ ಸಲ್ಲಿಸುತ್ತೇನೆ ಅಂತಾರೆ ಶ್ರೀಧನ್ಯಾ ಸುರೇಶ್.
ಊರ ಜನರಿಗೆಲ್ಲ ಸಿಹಿ ಹಂಚಿದ ಹೆತ್ತವರು :
ಹೆತ್ತವರಂತೂ ಮಗಳ ಈ ಸಾಧನೆ ಕಂಡು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಡೀ ಊರಿಗೆ ಊರೇ ಸಂಭ್ರಮಪಡುತ್ತಿದೆ. ತಂದೆತಾಯಿ ಕಷ್ಟಗಳೆಲ್ಲ ಮಗಳಿಂದ ದೂರವಾಗುತ್ತವೆ ಅಂತಾ ಎಲ್ಲರೂ ಹೇಳೋವಾಗಲಂತೂ ಅವರ ಕಣ್ಣುಗಳು ಆನಂದ ಬಾಷ್ಪ ಸುರಿಸುತ್ತಿವೆ. ಎಲ್ಲ ಸೌಲಭ್ಯಗಳ ಮಧ್ಯೆಯೂ ಏನೂ ಮಾಡದೇ ಇರುವವರಿದ್ದಾರೆ. ಆದರೆ, ಸವಾಲು-ಸಂಕಷ್ಟಗಳಿದ್ದರೂ ಈ ರೀತಿಯ ಸಾಧನೆ ಮಾಡಿದವರೂ ಕಣ್ಮುಂದೆ ಕಾಣಿಸ್ತಾರೆ.