ನವದೆಹಲಿ: ಚಳಿಗಾಲದ ಸಣ್ಣ ವಿರಾಮದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಇಂದಿನಿಂದ ದೆಹಲಿಯಿಂದ ಪುನಾರಂಭಗೊಂಡಿದೆ. ಇದೀಗ ಒಂಬತ್ತು ದಿನಗಳ ಬ್ರೇಕ್ ಬಳಿಕ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವನ್ನು ರಾಹುಲ್ ಮುನ್ನಡೆಸಲಿದ್ದಾರೆ.
ಯಾತ್ರೆಯು 110 ದಿನ ಮತ್ತು 3 ಸಾವಿರ ಕಿ.ಮೀಗೂ ಅಧಿಕ ದೂರ ಕ್ರಮಿಸಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣ ಭಾಗಗಳನ್ನು ದಾಟಿ ಬಂದು ದೆಹಲಿ ತಲುಪಿದ್ದು ಇಂದು ಯುಪಿ ಕಡೆಗೆ ಸಾಗುತ್ತಿದೆ. ಇದಾದ ಬಳಿಕ ಇದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಅಲ್ಲಿ ಅಂತ್ಯಗೊಳ್ಳಲಿದೆ.
ದೇಶದ ಇತಿಹಾಸದಲ್ಲೇ ಅತಿ ಉದ್ದದ ಯಾತ್ರೆ: ರಾಹುಲ್ ಅವರು ಅವಿರತವಾಗಿ ನಡೆಸುತ್ತಿರುವ ಭಾರತ ಜೋಡೋ ದೇಶದ ಇತಿಹಾಸದಲ್ಲಿಯೇ ಅತಿ ಉದ್ದದ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಹಿಂದೆ ನಡೆದ ಯಾವುದೇ ಯಾತ್ರೆಗಳು ಇಷ್ಟು ಉದ್ದ ಸಾಗಿ ಬಂದಿಲ್ಲ. ಇದರ ಮೂಲಕ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮತ್ತು ಬಿಜೆಪಿಯ ವಿರುದ್ಧ ಜನರನ್ನು ಒಗ್ಗೂಡಿಸುವ ಗುರಿ ಹೊಂದಿದ್ದಾರೆ ಎಂದು ಪಕ್ಷ ಹೇಳಿದೆ.
ಕೈಗೆ ಕೈ ಸೇರಿಸಿ ಅಭಿಯಾನ: ಭಾರತ ಜೋಡೋ ಯಾತ್ರೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇದೇ 26 ಕ್ಕೆ ಮುಕ್ತಾಯವಾಗಲಿದೆ. ಸಂಪನ್ನದ ಬಳಿಕ ಯಾತ್ರೆಯ ಸಂದೇಶವನ್ನು ದೇಶಾದ್ಯಂತ ಹರಡಲು ಹಾಥ್ ಸೇ ಹಾಥ್ ಜೋಡೋ ಅಭಿಯಾನ ಪ್ರಾರಂಭಿಸಲು ಕಾಂಗ್ರೆಸ್ ಸಜ್ಜಾಗಿದೆ.
ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಜವಾಬ್ದಾರಿ ವಹಿಸಲಾಗಿದೆ. ಮಹಿಳೆಯರ ಮೇಲೆ ವಿಶೇಷ ಗಮನ ಹರಿಸಲು ಈ ಅಭಿಯಾನಕ್ಕೆ ಪಕ್ಷ ಮುಂದಾಗಿದೆ.
ಪ್ರಿಯಾಂಕಾ ಗಾಂಧಿ ಮುಂದಾಳು: ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, 'ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಎರಡು ತಿಂಗಳ ಕಾಲ ಹಾಥ್ ಸೇ ಹಾಥ್ ಜೋಡೋ ಅಭಿಯಾನವನ್ನು ನಡೆಸಲಿದೆ. ಇದರ ಮುಂದಾಳಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ಜನರಿಗೆ ತಿಳಿಸಲು ಇದನ್ನು ಹಮ್ಮಿಕೊಳ್ಳಲಾಗಿದೆ' ಎಂದರು.
ಇದನ್ನೂ ಓದಿ: 'ರಾಮನ ಆಶೀರ್ವಾದ ನಿಮ್ಮೊಂದಿಗಿರಲಿ..': ರಾಹುಲ್ ಯಾತ್ರೆಗೆ ಶುಭ ಕೋರಿದ ರಾಮಮಂದಿರ ಮುಖ್ಯ ಅರ್ಚಕ