ಹೈದರಾಬಾದ್: ಭಾರತ್ ಬಯೋಟೆಕ್ನ ಕೊರೊನಾ ವೈರಸ್ ಲಸಿಕೆ ಕೊವ್ಯಾಕ್ಸಿನ್ನ 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶ ಬಹಿರಂಗಗೊಂಡಿದ್ದು, ಕೊರೊನಾ ವೈರಸ್ ತಡೆಗಟ್ಟುವಲ್ಲಿ ಶೇ 81ರಷ್ಟು ಪರಿಣಾಮಕಾರತ್ವ ತೋರಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಆರಂಭಗೊಂಡಿದ್ದ ಪ್ರಯೋಗದಲ್ಲಿ 25 ಸೈಟ್ಗಳಲ್ಲಿ 25,800 ಜನರು ಭಾಗಿಯಾಗಿದ್ದರು ಎಂದು ಕಂಪನಿ ತಿಳಿಸಿದೆ. 18-98 ವಯಸ್ಸಿನ ವಯಸ್ಸಿನ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದು, 2,433 ಜನರು 60 ವಯಸ್ಸಿನವರಾಗಿದ್ದರು.
ಇದೀಗ ಹೆಚ್ಚಿನ ಡೇಟಾ ಸಂಗ್ರಹಣೆ ಮಾಡಲು ಹಾಗೂ ಲಸಿಕೆಯ ಪರಿಣಾಮಕಾರತ್ವ ಮೌಲ್ಯಮಾಪನ ಮಾಡಲು 130 ದೃಢಪಡಿಸಿದ ಪ್ರಕರಣಗಳ ಅಂತಿಮ ವಿಶ್ಲೇಷಣೆಯ ಪ್ರಯೋಗ ಮುಂದುವರಿಯಲಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಲಸಿಕೆ ಆವಿಷ್ಕಾರ ವಿಜ್ಞಾನ ಮತ್ತು ಕೊರೊನಾ ವೈರಸ್ ವಿರುದ್ಧದ ನಮ್ಮ ಹೋರಾಟದ ಪ್ರಮುಖ ಮೈಲಿಗಲ್ಲು. ನಮ್ಮ 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶದಿಂದ ನಾವು ಇದೀಗ ಕೋವಿಡ್-19 ಲಸಿಕೆಯ ಹಂತ 1,2 ಮತ್ತು 3ನೇ ಪ್ರಯೋಗದ ಡೇಟಾ ವರದಿ ಮಾಡಿದ್ದೇವೆ ಎಂದಿದ್ದು, ಇದರಲ್ಲಿ 27,000 ಜನರು ಭಾಗಿಯಾಗಿದ್ದರು ಎಂದು ಭಾರತ್ ಬಯೋಟೆಕ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಟಿಪ್ ಟಾಪಾಗಿ ಶರ್ಟ್-ಪ್ಯಾಂಟ್ ತೊಟ್ಟು ಗತ್ತಿನಿಂದ ಹೊರಟ ಆನೆ ನಡಿಗೆಗೆ ಆನಂದ್ ಮಹೀಂದ್ರಾ ಫಿದಾ!
ಕೊರೊನಾ ವೈರಸ್ ವಿರುದ್ಧ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ ಎರಡು ಕೋವಿಡ್ ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಒಂದಾಗಿದ್ದು, ಹೈದರಾಬಾದ್ನ ಭಾರತ್ ಬಯೋಟೆಕ್ನಿಂದ ಇದು ಅಭಿವೃದ್ಧಿಗೊಂಡಿದೆ.