ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರ ಹೋರಾಟ ಶುರುವಾಗಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಇಂದು ಮುಂಜಾನೆಯಿಂದಲೇ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಲುಗಟ್ಟಿ ನಿಂತ ಸಾವಿರಾರು ವಾಹನಗಳು
ಭಾರತ್ ಬಂದ್ ಹಿನ್ನೆಲೆ ದೆಹಲಿ ಪ್ರವೇಶಿಸುವ ವಾಹನಗಳನ್ನು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ತಪಾಸಣೆ ನಡೆಸುತ್ತಿರುವುದರಿಂದ ಗುರುಗ್ರಾಮ - ದೆಹಲಿ, ದೆಹಲಿ-ನೋಯ್ಡಾ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಂದಾಜು ಒಂದೂವರೆ ಕಿಲೋ ಮೀಟರ್ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿವೆ. ಅಲ್ಲದೇ, ಹಲವಾರು ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಪ್ರತಿಭಟನೆ
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ರೈತ ಸಂಘಟನೆ ಇಂದು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಪ್ರತಿಭಟನೆ ನಡೆಸುತ್ತಿದೆ. ಈ ಸಂಘಟನೆಯು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಿ ಪ್ರತಿಭಟಿಸುವುದಾಗಿ ಘೋಷಿಸಿತ್ತು. ಇಂದು ಬೆಳಗ್ಗೆ, ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಗಾಜಿಪುರ ಪ್ರತಿಭಟನಾ ಸ್ಥಳದ ಬಳಿ ನಿರ್ಬಂಧಿಸಲಾಗಿದೆ. ಇದು ಉತ್ತರ ಪ್ರದೇಶದಿಂದ ಬರುವವರ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: ಭಾರತ ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ: ಸಿಎಂ ಬೊಮ್ಮಾಯಿ
ತುರ್ತು ಸೇವೆ ವಾಹನಗಳ ಓಡಾಟಕ್ಕಿಲ್ಲ ಅಡ್ಡಿ
ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ನಮ್ಮ ಹೋರಾಟಕ್ಕೆ ಲಕ್ಷಾಂತರ ಜನರು ಬೆಂಬಲ ಸೂಚಿಸಿದ್ದಾರೆ. ನಾವು ಯಾವುದೇ ಹೆದ್ದಾರಿಗಳನ್ನು ಮುಚ್ಚಿಲ್ಲ. ತುರ್ತು ಸೇವೆ ವಾಹನಗಳ ಓಡಾಟಕ್ಕೆ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
ಹೆದ್ದಾರಿಗಳ ನಿರ್ಬಂಧ
ಚಂಡೀಗಡದಿಂದ ದೆಹಲಿಗೆ ಸಂಪರ್ಕಿಸುವ ರಸ್ತೆಗಳನ್ನು ರೈತರು ನಿರ್ಬಂಧಿಸಿದ್ದಾರೆ. ಗಾಜಿಪುರ ಗಡಿಯಲ್ಲಿ ಪ್ರತಿಭಟನಾಕಾರರು ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇಯನ್ನು ನಿರ್ಬಂಧಿಸಲಾಗಿದೆ. ಪ್ರತಿಭಟನಾ ನಿರತ ರೈತರಿಗೆ ತೋಟಗಾರಿಕಾ ಮಾರುಕಟ್ಟೆಯಲ್ಲಿ ಆಹಾರದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲ ಇದೆ: ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಸ್ಪಷ್ಟನೆ
ರಾಜ್ಯದಲ್ಲೂ ಪ್ರತಿಭಟನೆಯ ಕಾವು
ಇತ್ತ ರಾಜ್ಯದ ಬೆಂಗಳೂರು, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹೋರಾಟಗಾರರು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.