ವೈಶಾಲಿ(ಬಿಹಾರ): ವಿಶ್ವವಿಖ್ಯಾತ ಸೋನೆಪುರ್ ಜಾತ್ರೆ (ಹರಿಹರ ಜಾತ್ರೆ) ಇಂದಿನಿಂದ ಪ್ರಾರಂಭವಾಗಿದೆ. ಈ ಜಾತ್ರೆಯ ಕೇಂದ್ರ ಬಿಂದುವಾದ ಕುದುರೆ ಓಟದ ಸ್ಪರ್ಧೆಯಲ್ಲಿ ಭಾಗಹಿಸಲು ಈ ಬಾರಿ ಸುಮಾರು 500 ಕುದುರೆಗಳು ಇಲ್ಲಿಗೆ ಆಗಮಿಸಿವೆ. ಇವುಗಳಲ್ಲಿ ಉತ್ತರ ಪ್ರದೇಶದ ಕರಡಿ ಎಂಬ ಹೆಸರಿನ ಕುದುರೆ ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಜಾತ್ರೆಯ ಮೆರುಗು ಹೆಚ್ಚಿಸಲು ಹೇಮಾ ಮತ್ತು ಮಾಧುರಿ ಎಂಬ ಹೆಣ್ಣು ಕುದುರೆಗಳು ಸಹ ಆಗಮಿಸಿವೆ.
ಸೋನೆಪುರದ ಜಾತ್ರೆಯೂ ಜಾನುವಾರುಗಳ ಜಾತ್ರೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಆನೆಗಳು, ಕುದುರೆಗಳು, ಹಸುಗಳು, ಎತ್ತುಗಳು, ಆಡುಗಳು ಮತ್ತು ಎಮ್ಮೆ ಸೇರಿದಂತೆ ಹಲವು ಪ್ರಾಣಿಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಸಂಪ್ರದಾಯವಿದೆ. ವಿಶೇಷವಾಗಿ, ಕುದುರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಯಲ್ಲಿ ಭಾಗವಹಿಸುತ್ತವೆ. ಇಲ್ಲಿ ಕುದುರೆ ಖರೀದಿ ಮತ್ತು ಮಾರಾಟದ ಜೊತೆಗೆ, ಪ್ರದರ್ಶನ ಮತ್ತು ಕುದುರೆ ರೇಸ್ ಸಹ ಆಯೋಜಿಸಲಾಗುತ್ತದೆ. ಈ ವರ್ಷದ ಸೋನೆಪುರ್ ಜಾತ್ರೆಯಲ್ಲಿ ವಿವಿಧ ರಾಜ್ಯಗಳ ಮತ್ತು ಬಿಹಾರದ ವಿವಿಧ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಕುದುರೆಗಳು ಭಾಗವಹಿಸಿವೆ.
ಗಂಟೆಗೆ 42 ಕಿ.ಮೀ ವೇಗದಲ್ಲಿ ಓಡುವ ಕರಡಿ: ಉತ್ತರ ಪ್ರದೇಶದ ಗಾಜಿಪುರದಿಂದ ಜಾತ್ರೆಗೆ ಬಂದಿರುವ ಬಾಲು (ಕರಡಿ) ಎಂಬ ಕುದುರೆ ಎಲ್ಲರ ಗಮನ ಸೆಳೆಯುತ್ತಿದೆ. ಇದು ಗಂಟೆಗೆ 42 ಕಿ.ಮೀ ವೇಗದಲ್ಲಿ ಓಡುತ್ತದೆ. ಕರಡಿಯನ್ನು ಜಾತ್ರೆಯಲ್ಲಿ ಮಾರಲು ತಂದಿಲ್ಲ, ಇಲ್ಲಿ ನಡೆಯುವ ಕುದುರೆ ರೇಸ್‌ನಲ್ಲಿ ಸ್ಪರ್ಧಿಸಲು ತರಲಾಗಿದೆ. ಕುದುರೆಗೆ ಕರಡಿ ಎಂದು ಹೆಸರಿಡಲು ಕಾರಣ ಎಂದರೆ, ಅದು ಚಿಕ್ಕದಾಗಿದೆ ಮತ್ತು ಮೈ ತುಂಬಾ ಕೂದಲನ್ನು ಹೊಂದಿತ್ತು. ಇದರಿಂದ ಅದು ತುಂಬಾ ಸುಂದರವಾಗಿ ಕಾಣುತ್ತಿತ್ತು, ಹೀಗಾಗಿ ಅದಕ್ಕೆ ಕರಡಿ ಎಂದು ಹೆಸರಿಡಲಾಯಿತು ಎಂದು ಕರಡಿ ಕುದುರೆಯ ಮಾಲೀಕ ಮನೀಶ್ ಕುಮಾರ್ ತಿಳಿಸಿದರು.
ದೈಹಿಕವಾಗಿ ಸದೃಢವಾಗಿರುವ ಕುದುರೆಯನ್ನು ಬರ್ಹಾಂಪುರದಲ್ಲಿ ಮೂರುವರೆ ಲಕ್ಷ ರೂ. ಕೊಟ್ಟು ಖರೀದಿಸಲಾಗಿದೆ. ಸದ್ಯ ಕುದುರೆಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿಲ್ಲ. ಇದು ಸಿಂಧಿ ತಳಿಯ ಕುದುರೆಯಾಗಿದ್ದು, ಕುದುರೆಗಳನ್ನು ಸಾಕುವವರಿಗೆ ನೆಚ್ಚಿನ ತಳಿ ಇದಾಗಿದೆ. ಇದು ಸಂಪೂರ್ಣ ತರಬೇತಿ ಪಡೆದ ಕುದುರೆಯಾಗಿದೆ. ಇದು ರೇಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ನಿರೀಕ್ಷೆಯಿದೆ. ಕರಡಿಗೆ ಈಗ 4 ವರ್ಷ ವಯಸ್ಸಾಗಿದೆ ಎಂದು ಅದರ ಮಾಲೀಕರು ಮಾಹಿತಿ ನೀಡಿದರು.
ಎಲ್ಲರನ್ನು ಆಕರ್ಷಿಸುತ್ತಿರುವ ಹೇಮಾ, ಮಾಧುರಿ: ಇನ್ನು ಜಾತ್ರೆಯಲ್ಲಿ ಹೇಮಾ ಮತ್ತು ಮಾಧುರಿ ಕುದುರೆಗಳು ಎಲ್ಲರನ್ನು ಆಕರ್ಷಸುತ್ತಿವೆ. ತೂಫಾನ್ ಸಿಂಗ್ ಎಂಬುವವರು ಬಿಹಾರದ ಅರ್ರಾದಿಂದ ಐದು ಕುದುರೆಗಳನ್ನು ಜಾತ್ರೆಗೆ ತಂದಿದ್ದಾರೆ. ವಿಶೇಷ ಎಂದರೆ ಈ ಐದು ಕುದುರೆಗಳಿಗೆ ಸಿನಿಮಾ ನಟಿಯರ ಹೆಸರಿಡಲಾಗಿದೆ. ಹೇಮಾ ಕುದುರೆಯ ಸೌಂದರ್ಯವನ್ನು ಪ್ರದರ್ಶಿಸಲು ಜಾತ್ರೆಗೆ ಕರೆತರಲಾಗಿದೆ. ಪದವಿ ಮುಗಿಸಿದ ಬಳಿಕ ಕೆಲಸ ಸಿಗದಿದ್ದಾಗ, ತಮ್ಮ ಪೂರ್ವಜರ ಮಾಡಿಕೊಂಡು ಬಂದ ಕುದುರೆ ವ್ಯಾಪಾರವನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ಹೇಮಾ ಪಂಜಾಬಿನ ಕುದುರೆ ತಳಿಯಾಗಿದೆ. ಹೇಮಾಗೆ ಈಗ ಒಂದು ವರ್ಷ ನಾಲ್ಕು ತಿಂಗಳು ವಯಸ್ಸು ಎಂದು ಕುದುರೆಯ ಮಾಲೀಕ ತೂಫಾನ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: ಜಾನುವಾರು ಮೇಳದ ಪ್ರದರ್ಶನದಲ್ಲಿ ಕಾಣಿಸಿಕೊಂಡ ಕೇಸರಿ ಕುದುರೆ: ವಿದೇಶಿಗನಿಂದ 10 ಕೋಟಿ ಆಫರ್! ಏನಿದರ ವಿಶೇಷತೆ?