ಚಂಡೀಗಢ(ಪಂಜಾಬ್): ಪಂಜಾಬ್ನಲ್ಲಿ ನೂತನವಾಗಿ ಸರ್ಕಾರ ರಚನೆ ಮಾಡಿರುವ ಭಗವಂತ್ ಮಾನ್ ಸರ್ಕಾರ ಒಂದಿಲ್ಲೊಂದು ಹೊಸ ಜನೋಪಕಾರಿ ಯೋಜನೆಗಳ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಖಾಸಗಿ ಶಾಲೆಗಳ ಶುಲ್ಕ ಹೆಚ್ಚಿಸುವುದರ ಮೇಲೆ ಕಡಿವಾಣ ಹಾಕಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ತಾವು ಗುರುತು ಮಾಡಿರುವ ಅಂಗಡಿಯಿಂದಲೇ ಪುಸ್ತಕ ಮತ್ತು ಸಮವಸ್ತ್ರ ಖರೀದಿ ಮಾಡುವಂತೆ ಸೂಚನೆ ನೀಡಬಾರದು ಎಂದು ತಿಳಿಸಿದ್ದಾರೆ. ಮಕ್ಕಳ ಪೋಷಕರು ತಮ್ಮ ಇಚ್ಛೆಯಂತೆ ಸಮವಸ್ತ್ರ ಹಾಗೂ ಪುಸ್ತಕ ಖರೀದಿ ಮಾಡಲು ಅವಕಾಶ ನೀಡುವಂತೆಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ₹92 ಕೋಟಿಗೂ ಅಧಿಕ ಮೌಲ್ಯದ ನಕಲಿ ನೋಟು ವಶ: ಕೇಂದ್ರ ಸರ್ಕಾರ
ಈ ನಿರ್ಧಾರದಿಂದ ಅನೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ತಮ್ಮ ಶಿಕ್ಷಣ ಪಡೆದುಕೊಳ್ಳುವ ಕನಸು ಪೂರೈಸಿಕೊಳ್ಳಬಹುದಾಗಿದ್ದು, ಪೋಷಕರ ಮೇಲೆ ಬೀಳುವ ಅನಗತ್ಯ ಶುಲ್ಕದ ಹೊರೆ ಸಹ ಕಡಿಮೆಯಾಗಲಿದೆ ಎಂದು ಭಗವಂತ್ ಮಾನ್ ತಿಳಿಸಿದ್ದಾರೆ. ಪಂಜಾಬ್ನಲ್ಲಿ ಅಧಿಕಾರ ನಡೆಸುತ್ತಿರುವ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ಈಗಾಗಲೇ ಮನೆ ಮನೆಗೆ ಪಡಿತರ ವಿತರಣೆ, ರೈತರಿಗೆ ಪರಿಹಾರದ ಚೆಕ್, ಶಾಸಕರಿಗೆ ಒಂದೇ ಪಿಂಚಣಿ, 35 ಸಾವಿರ ಅರೆಕಾಲಿಕ ನೌಕರರ ಖಾಯಂ, ಭ್ರಷ್ಟಾಚಾರದ ವಿರುದ್ಧ ಸಹಾಯವಾಣಿ ಸೇರಿದಂತೆ ಅನೇಕ ರೀತಿಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.