ನವದೆಹಲಿ: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮ ಖಟ್ಕರ್ಕಲನ್ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದು ಪಂಜಾಬ್ನ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಘೋಷಿಸಿದ್ದಾರೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಭಾರಿ ಮುನ್ನಡೆ ಸಾಧಿಸಿದ್ದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಲು ಸಜ್ಜಾಗಿದೆ. ಸಂಗ್ರೂರ್ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಗವಂತ್ ಮನ್ , ನಾನು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಪ್ರಕಟಿಸಿದರು.
ಅಲ್ಲದೇ, ರಾಜ್ಯದ ಯಾವುದೇ ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಭಾವಚಿತ್ರಗಳ ಅಳವಡಿಸುವಂತಿಲ್ಲ. ಬದಲಿಗೆ ಅಲ್ಲಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳ ಅಳವಡಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದ್ದಾರೆ.
ಹಾಲಿ ಸಂಸದರಾಗಿರುವ ಭಗವಂತ್ ಮನ್ ಈ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಧುರಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರು ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ವಿರುದ್ಧ 58,206 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಇನ್ನು, ಖಟ್ಕರ್ಕಲನ್ ಗ್ರಾಮದಲ್ಲಿ ಭಗತ್ ಸಿಂಗ್ ಸ್ಮಾರಕವಿದ್ದು, ಇಲ್ಲಿ ಅವರ ಚಿತಾಭಸ್ಮವನ್ನು ಸಂರಕ್ಷಿಸಲಾಗಿದೆ.
ಇದನ್ನೂ ಓದಿ: Punjab Result: ಪಂಜಾಬ್ನಲ್ಲಿ ಆಪ್ಗೆ ಭಾರಿ ಮುನ್ನಡೆ.. ಮಾಜಿ ಸಿಎಂ ಕ್ಯಾ. ಅಮರೀಂದರ ಸಿಂಗ್ಗೆ ಸೋಲು