ಭವಾನಿಪುರ (ಪಶ್ಚಿಮ ಬಂಗಾಳ): ತೀವ್ರ ಕುತೂಹಲ ಕೆರಳಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೂತ್ ವಶಪಡಿಸಿಕೊಳ್ಳಲು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯತ್ನಿಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಪರಿಸ್ಥಿತಿಯನ್ನು ಪರಿಶೀಲಿಸಲು ವಾರ್ಡ್ ಸಂಖ್ಯೆ 72ರ ಮತಗಟ್ಟೆಗೆ ಬಂದ ಪ್ರಿಯಾಂಕಾ, ಟಿಎಂಸಿಯ ಮದನ್ ಮಿತ್ರ ಅವರು ಮತಗಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮತಯಂತ್ರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಉಪಚುನಾವಣೆ: ದೀದಿ ಸ್ಪರ್ಧಿಸುತ್ತಿರುವ ಭವಾನಿಪುರ ಕ್ಷೇತ್ರದ ಮೇಲೆಯೇ ಎಲ್ಲರ ಕಣ್ಣು
ಇಂದು ಪಶ್ಚಿಮ ಬಂಗಾಳದ ಭವಾನಿಪುರ, ಜಂಗೀಪುರ್, ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯವರೆಗೆ ಭವಾನಿಪುರದಲ್ಲಿ ಶೇ.22 ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗವು ಮೂರು ಕ್ಷೇತ್ರಗಳಲ್ಲಿ 72 ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ್ದು, ಅವುಗಳಲ್ಲಿ 35 ಪಡೆಗಳನ್ನು ಭವಾನಿಪುರದಲ್ಲೇ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭವಾನಿಪುರ ಉಪಚುನಾವಣೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ಕದನವಾಗಿ ಪರಿಣಮಿಸಿದೆ. ಈ ಕ್ಷೇತ್ರದಲ್ಲಿ ಅವರು ಗೆದ್ದಿಲ್ಲ ಅಂದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ. ಇವರ ಎದುರಾಳಿಯಾಗಿ ಪ್ರಿಯಾಂಕಾ ಟಿಬ್ರೇವಾಲ್ (41) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.