ಕೊರೊನಾ ವೈರಸ್‌ನ BF.7 ರೂಪಾಂತರವು ಓಮಿಕ್ರಾನ್ ಸ್ಟ್ರೈನ್‌ನ ಉಪ ವೆರಿಯಂಟ್ ಆಗಿದ್ದು, ಭಾರತ ಜನಸಂಖ್ಯೆಯ ಮೇಲೆ ಇದು ಅಷ್ಟೊಂದು ತೀವ್ರ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ದೇಶದ ಪ್ರಖ್ಯಾತ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿರುವುದು ಭಯ ನಿವಾರಣೆ ಮಾಡುವ ನಿಟ್ಟಿನಲ್ಲಿ ಬಹಳ ಪ್ರಮುಖವಾಗಿದೆ. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್) ನಿರ್ದೇಶಕರೂ ಆಗಿರುವ ರಾಕೇಶ್ ಮಿಶ್ರಾ, ಫೇಸ್ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಜನಸಂದಣಿ ತಪ್ಪಿಸುವುದು ಯಾವಾಗಲೂ ಸೂಕ್ತ ಎಂದು ಎಚ್ಚರಿಸಿದ್ದಾರೆ.
ಸಿಎಸ್ಐಆರ್-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರದ ಮಾಜಿ ನಿರ್ದೇಶಕರಾಗಿರುವ ಮಿಶ್ರಾ, ನೆರೆಯ ದೇಶ ಚೀನಾ, ಭಾರತದಂತೆ ಸೋಂಕಿನ ವಿವಿಧ ಅಲೆಗಳನ್ನು ಎದುರಿಸದ ಕಾರಣದಿಂದ ಕೋವಿಡ್-19 ಪ್ರಕರಣಗಳಲ್ಲಿ ಅತ್ಯಧಿಕ ಏರಿಕೆ ಕಾಣುತ್ತಿದೆ ಎಂದು ಹೇಳಿದರು.
ಇದು ಓಮಿಕ್ರಾನ್‌ನ ಉಪ-ರೂಪವಾಗಿದೆ. ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ ಇದರ ಮುಖ್ಯ ಗುಣಲಕ್ಷಣಗಳು ಓಮಿಕ್ರಾನ್ನಂತೆಯೇ ಇರುತ್ತವೆ. ಎರಡರಲ್ಲೂ ಅಂಥ ದೊಡ್ಡ ವ್ಯತ್ಯಾಸವಿಲ್ಲ. ನಮ್ಮಲ್ಲಿ ಹೆಚ್ಚಿನವರು ಓಮಿಕ್ರಾನ್ ಅಲೆಯನ್ನು ಈಗಾಗಲೇ ಎದುರಿಸಿದ್ದೇವೆ. ಆದ್ದರಿಂದ, ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಮೂಲಭೂತವಾಗಿ ಇದು ಅದೇ ವೈರಸ್ ಎಂದು ಹೇಳಿದರು.
ಚೀನಾದಲ್ಲಿ ಅದರ ಶೂನ್ಯ ಕೋವಿಡ್ ನೀತಿಯ ಕಾರಣದಿಂದ ಪ್ರಕರಣಗಳು ಮಿತಿಮೀರಿ ಹೆಚ್ಚಾಗುತ್ತಿವೆ. ಶೂನ್ಯ ಕೋವಿಡ್ ನೀತಿಯಡಿ, ಕಟ್ಟಡದಲ್ಲಿ ಯಾರೇ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಲ್ಲಿ ಸೋಂಕು ಉಲ್ಬಣವಾಗುವುದನ್ನು ತಪ್ಪಿಸಲು ಅಪಾರ್ಟಮೆಂಟ್, ಕಟ್ಟಡಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಇದು ಜನರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ವಿಜ್ಞಾನಿ ಹೇಳಿದರು. ಚೀನಾದ ಜನಸಂಖ್ಯೆಯು ನೈಸರ್ಗಿಕ ಸೋಂಕಿಗೆ ಒಳಗಾಗಿಲ್ಲ ಮತ್ತು ಅವರು ವಯಸ್ಸಾದ ಜನರಿಗೆ ಲಸಿಕೆ ಹಾಕಿಲ್ಲ ಎಂದು ಮಿಶ್ರಾ ಹೇಳಿದರು.
ಆದ್ದರಿಂದ ಅವರು ಲಸಿಕೆ ಹಾಕಿಸಿಕೊಳ್ಳದ ಕಾರಣ ಅವರಿಗೆ ರೋಗಲಕ್ಷಣಗಳು ತೀವ್ರವಾಗಿವೆ. ಇಷ್ಟಾದರೂ ಕಿರಿಯರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಲಸಿಕೆ ಹಾಕದ ವಯಸ್ಸಾದವರಲ್ಲಿ ಇದು ಬಹಳ ವೇಗವಾಗಿ ಹರಡುತ್ತಿದೆ ಎಂದು ಅವರು ಹೇಳಿದರು.
ಅವರ ಪ್ರಕಾರ, ಹೆಚ್ಚಿನ ಭಾರತೀಯರು ಹೈಬ್ರಿಡ್ ಪ್ರತಿರಕ್ಷೆಯನ್ನು ಪಡೆದುಕೊಂಡಿದ್ದಾರೆ. ಅಂದರೆ ಲಸಿಕೆಗಳ ಮೂಲಕ ಮತ್ತು ವಿವಿಧ ಕೋವಿಡ್-19 ರೂಪಾಂತರಗಳ ಸೋಂಕು ನೈಸರ್ಗಿಕವಾಗಿಯೇ ತಗುಲಿ ಹೋಗಿರುವುದರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ವಿಭಿನ್ನ ಓಮಿಕ್ರಾನ್ ರೂಪಾಂತರಗಳನ್ನು ತಡೆಗಟ್ಟಲು ಉತ್ತಮವಾಗಿವೆ. ಈ ವರ್ಷದ ಆರಂಭದಲ್ಲಿ ಬಂದ ಓಮಿಕ್ರಾನ್‌ನ ದೊಡ್ಡ ಅಲೆಯಲ್ಲಿ ಸಹ ಭಾರತದಲ್ಲಿ ಹೆಚ್ಚಿನ ಜನ ಆಸ್ಪತ್ರೆಗೆ ದಾಖಲಾಗಲಿಲ್ಲ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ನಾಸಲ್ ಲಸಿಕೆಗೆ ಭಾರತ ಸರ್ಕಾರದ ಅನುಮೋದನೆ: ಲಸಿಕಾ ಯೋಜನೆ ಪಟ್ಟಿಯಲ್ಲೂ ಸೇರ್ಪಡೆ.. ಆರೋಗ್ಯ ಇಲಾಖೆ