ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಮತ್ತೊಂದೆಡೆ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದೆ. ಈ ಎರಡು ಬೆಳವಣಿಗೆಗಳ ಮೇಲೆ ಜನರ ಬೆಟ್ಟಿಂಗ್ ದಂಧೆ ಜೋರಾಗಿದೆ. ಹವಾಲಾ ದಂಧೆಕೋರರು ಮತ್ತು ದಲ್ಲಾಳಿಗಳ ಚಲನವಲನಗಳ ಮೇಲೆ ಎಚ್ಚರಿಕೆ ವಹಿಸಿರುವ ಪೊಲೀಸರು, ವಾರದಲ್ಲಿ ಸುಮಾರು 8 ಕೋಟಿ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಆ್ಯಪ್ ಆಧಾರಿತ ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರ ಪಂದ್ಯಗಳಿಗಾಗಿ ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಸುದ್ದಿ ಗೊತ್ತಾದ ತಕ್ಷಣ ಅಲರ್ಟ್ ಆದ ಹೈದರಾಬಾದ್ ಪೊಲೀಸರು, ಹಲವರನ್ನು ಬಂಧಿಸಿ, ಅಪಾರ ಪ್ರಮಾಣದ ಹಣ, ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಟ್ಟಿಂಗ್ ದಂಧೆ ನಗರದ ಮಧ್ಯಭಾಗದಲ್ಲಿ ಜೋರಾಗಿದ್ದು ಮೂರು ಪೊಲೀಸ್ ಕಮಿಷನರೇಟ್‌ಗಳ ವ್ಯಾಪ್ತಿಯಲ್ಲಿ ಈವರೆಗೆ 20 ರಿಂದ 30 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇತ್ತೀಚಿನ ಐಪಿಎಲ್ ಪಂದ್ಯಗಳ ಮೇಲೂ ಬೆಟ್ಟಿಂಗ್ ನಡೆಸಿದ್ದ 10 ಆರೋಪಿಗಳನ್ನು ಬಂಧಿಸಲಾಗಿದ್ದು, 1 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ.
''ಒಂದೆಡೆ ಚುನಾವಣೆ ಘೋಷಣೆಯಾದರೆ, ಮತ್ತೊಂದೆಡೆ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದೆ. ಬುಕ್ಕಿಗಳು ಆನ್‌ಲೈನ್/ಆ್ಯಪ್/ವಾಟ್ಸ್‌ಆ್ಯಪ್ ಸೇರಿದಂತೆ ನಾನಾ ಕಡೆಗಳಲ್ಲಿ ಬೆಟ್ಟಿಂಗ್ ನಡೆಸುತ್ತಿರುವ ಮಾಹಿತಿ ಬಂದಿದೆ. ಆಂಧ್ರಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗ್ಯಾಂಗ್‌ಗಳು ಬೆಟ್ಟಿಂಗ್ ನಡೆಸಲು ಈಗಾಗಲೇ ನಗರಕ್ಕೆ ಕಾಲಿಟ್ಟಿವೆ. ಮುಗ್ಧ ಯುವಕರನ್ನು, ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರನ್ನು ಬುಕ್ಕಿಗಳು ಪಂಟರ್‌ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಪ್ರತಿ ಪಂದ್ಯಕ್ಕೆ 10 ರಿಂದ 20 ಪರ್ಸೆಂಟ್ ಕಮಿಷನ್ ಆಸೆ ತೋರಿಸಿ ಖೆಡ್ಡಾಕ್ಕೆ ಬೀಳಿಸುತ್ತಿದ್ದಾರೆ. ನಗರದಲ್ಲಿ ನಾಲ್ಕೈದು ಅಂತರರಾಜ್ಯ ಗ್ಯಾಂಗ್‌ಗಳು ನೆಲೆಯೂರಿರುವ ಬಗ್ಗೆ ವರದಿ ಇದೆ. ಚುನಾವಣೆ ಹಿನ್ನೆಲೆಯಲ್ಲಿ ವಾರದ ಹಿಂದೆ ನಡೆದ ಕೇಂದ್ರ ಚುನಾವಣಾ ಆಯೋಗದ ಸಭೆಯಲ್ಲಿ ಹಣ, ಹವಾಲಾ ಹಣ ಹಂಚಿಕೆ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು. ಈ ದೃಷ್ಟಿಯಿಂದ ಎಲ್ಲದರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ'' ಎಂದು ಸೈಬರಾಬಾದ್‌ನ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
''ಚುನಾವಣೆ ಹಿನ್ನೆಲೆಯಲ್ಲಿ ನಗರದ ಮೂರು ಕಮಿಷನರೇಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದೇಶ-ವಿದೇಶಗಳಿಂದ ಹವಾಲಾ ಮಾರ್ಗವಾಗಿ ನಗರಕ್ಕೆ ಬಂದಿರುವ ನಗದನ್ನು ಗೋದಾಮುಗಳು, ಹಳೆಯ ಕಟ್ಟಡಗಳು, ಬಂಗಾರದ ಅಂಗಡಿಗಳಲ್ಲಿ ಇಡಲಾಗುತ್ತಿದೆ ಎಂದು ಸುದ್ದಿ ಇದೆ. ಈ ಹಿಂದೆ ಇಂತಹ ಘಟನೆಗಳು ಬೇಗಂ ಬಜಾರ್, ಬಾರ್ಕಸ್, ಶಾಹಿನಾತ್ಗಂಜ್, ಚಾರ್ಮಿನಾರ್ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ, ಈ ಬಾರಿ ಅದು ಸಿಕಂದರಾಬಾದ್‌ಗೂ ವ್ಯಾಪಿಸಿದೆ. ಚುನಾವಣೆಗೆ ಮೂರು ತಿಂಗಳ ಮುಂಚೆಯೇ ನಗರಕ್ಕೆ ಭಾರಿ ಪ್ರಮಾಣದ ಹಣ ಬಂದಿರುವ ಬಗ್ಗೆ ಮಾಹಿತಿ ಇದೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ವೇಳೆ ಆನ್‌ಲೈನ್ ಬೆಟ್ಟಿಂಗ್ ಜಾಹೀರಾತಿಗೆ ಕಡಿವಾಣ; ಆಫ್ಲೈನ್ ದಂಧೆಯ ಮೇಲೆ ಪೊಲೀಸರ ಕಣ್ಣು