ಪುಣೆ (ಮಹಾರಾಷ್ಟ್ರ): ಪುಣೆಯ ವೈದ್ಯರೊಬ್ಬರು "ಬೇಟಿ ಬಚಾವೋ ಜನಾಂದೋಲನ"ದ ಭಾಗವಾಗಿ ಹೆಣ್ಣು ಮಕ್ಕಳನ್ನು ಉಳಿಸುವ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ. ಮಿಷನ್‌ನ ಭಾಗವಾಗಿ ಮತ್ತು ಹೆಚ್ಚಿನ ಹೆಣ್ಣು ಮಕ್ಕಳನ್ನು ಈ ಜಗತ್ತಿಗೆ ತರಲು ಪೋಷಕರನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಅವರು ತಮ್ಮ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಆಸ್ಪತ್ರೆ ಶುಲ್ಕವನ್ನು ಮನ್ನಾ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಹಡಪ್ಸರ್ ಪ್ರದೇಶದಲ್ಲಿ ಹೆರಿಗೆ-ಕಮ್-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ.ಗಣೇಶ್ ರಾಖ್ ಅವರು ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶುಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ನಡೆಸಿರುವ ಈ ಅಭಿಯಾನ ಗಮನ ಸೆಳೆಯುತ್ತಿದೆ.
![Pune doctor waives off hospital charges for girl babies](https://etvbharatimages.akamaized.net/etvbharat/prod-images/16855454_thumbnaws.jpg)
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಗಣೇಶ್ ರಾಖ್, "ಗಂಡು ಮಗು ಜನಿಸಿದರೆ ಕೆಲವು ಕುಟುಂಬಗಳು ಖುಷಿಯಿಂದ ಆಸ್ಪತ್ರೆಗೆ ಬಂದು ಬಿಲ್ ಪಾವತಿಸುತ್ತಿದ್ದರು. ಆದರೆ ಹೆಣ್ಣು ಮಗುವಾದರೆ ಕೆಲವು ಸಂದರ್ಭಗಳಲ್ಲಿ ಉದಾಸೀನ ಧೋರಣೆ ತಾಳುತ್ತಿದ್ದರು. ಇದರ ಬಗ್ಗೆ ಜಾಗೃತಿ ಮೂಡಿಸಿ ಹೆಣ್ಣು ಮಗು ಜನಿಸಿದರೆ ಸಂಪೂರ್ಣ ವೈದ್ಯಕೀಯ ಶುಲ್ಕವನ್ನು ಮನ್ನಾ ಮಾಡಲು ನಾವು ನಿರ್ಧರಿಸಿದ್ದೇವೆ" ಎಂದರು.
ಬೇಟಿ ಬಚಾವೋ ಜನಾಂದೋಲನ: ಈ ಉಪಕ್ರಮವನ್ನು ಬೇಟಿ ಬಚಾವೋ ಜನಾಂದೋಲನ ಎಂದು ನಾಮಕರಣ ಮಾಡಿದ್ದೇವೆ. ಕಳೆದ 11 ವರ್ಷಗಳಲ್ಲಿ ನಾವು ಯಾವುದೇ ಶುಲ್ಕವಿಲ್ಲದೆ 2,400 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಹೆರಿಗೆ ಮಾಡಿದ್ದೇವೆ. 2012ರಲ್ಲಿ ಪ್ರಾರಂಭಿಸಿದ ಸಣ್ಣ ಉಪಕ್ರಮವು ಈಗ ವಿವಿಧ ರಾಜ್ಯಗಳಲ್ಲಿ ಮತ್ತು ಕೆಲವು ಆಫ್ರಿಕನ್ ದೇಶಗಳಲ್ಲಿ ಹರಡಿದೆ ಎಂದರು.
![Pune doctor waives off hospital charges for girl babies](https://etvbharatimages.akamaized.net/etvbharat/prod-images/16855454_thumbs.jpg)
6 ಕೋಟಿಗೂ ಹೆಚ್ಚು ಭ್ರೂಣ ಹತ್ಯೆ: ಸರ್ಕಾರದ ಸಮೀಕ್ಷೆಯ ಪ್ರಕಾರ ಕಳೆದ 10 ವರ್ಷಗಳಲ್ಲಿ 6 ಕೋಟಿಗೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆದಿವೆ. ಇದು ಒಂದು ರೀತಿಯ ಜನಾಂಗೀಯ ಹತ್ಯೆ. ಒಂದು ಪ್ರದೇಶ, ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ಜಾಗತಿಕ ಸಾಮಾಜಿಕ ಸಮಸ್ಯೆಯಾಗಿದೆ ಎಂದು ಡಾ.ರಾಖ್ ಕಳವಳ ವ್ಯಕ್ತಪಡಿಸಿದರು.
ಈ ಅಭಿಯಾನ ಲಿಂಗ ತಾರತಮ್ಯ ತೊಡೆದು ಹಾಕಲು ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ಮಾರ್ಗವಾಗಿದೆ. ನಾವು ಸಾರ್ವಜನಿಕರಿಂದ, ನಮ್ಮ ವೈದ್ಯರು ಮತ್ತು ಸಾಮಾಜಿಕ ಸಂಸ್ಥೆಗಳಿಂದ ಅಪಾರ ಬೆಂಬಲವನ್ನು ಪಡೆದಿದ್ದೇವೆ. ಇಲ್ಲಿಯವರೆಗೆ, 4 ಲಕ್ಷಕ್ಕೂ ಹೆಚ್ಚು ವೈದ್ಯರು, 13,000 ಸಾಮಾಜಿಕ ಸಂಸ್ಥೆಗಳು ಮತ್ತು 25 ಲಕ್ಷ ಸ್ವಯಂಸೇವಕರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಗಣೇಶ್ ರಾಖ್ ತಿಳಿಸಿದರು.
ಇದನ್ನೂ ಓದಿ: ಪ್ರಸವ ಪೂರ್ವ ಲಿಂಗ ಪತ್ತೆ- ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ರಾಜ್ಯದಲ್ಲಿ ಹೇಗಿದೆ ಪರಿಸ್ಥಿತಿ?