ನವದೆಹಲಿ/ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಒಕ್ಕೂಟ ರಚಿಸಲು ಮುಂದಾಗಿರುವ ವಿಪಕ್ಷಗಳು ಇಂದಿನಿಂದ 2 ದಿನ (ಜುಲೈ 17,18) ಸಭೆ ಸೇರಲಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ವಿಪಕ್ಷಗಳ ನಾಯಕರು ಪಾಟ್ನಾ ಬಳಿಕ 2ನೇ ಬಾರಿಗೆ ಒಗ್ಗೂಡುತ್ತಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿಯನ್ನು ಎದುರಿಸಲಾಗುವುದು ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದರೆ, ರಾಹುಲ್ ಗಾಂಧಿ 'ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ' ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ.
ಈ ಬಗ್ಗೆ ಪಕ್ಷದ ಹಲವು ನಾಯಕರು ಕೂಡ ಹೇಳಿಕೆ ನೀಡುತ್ತಿದ್ದಾರೆ. "ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮತ್ತು ವಿರೋಧ ಪಕ್ಷದಲ್ಲಿ ಮಾಸ್ ಲೀಡರ್. ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ 'ಭಾರತ್ ಜೋಡೋ ಯಾತ್ರೆ'ಗಾಗಿ ಎಲ್ಲರೂ ಅವರನ್ನು ಶ್ಲಾಘಿಸಿದರು. ಹೀಗಾಗಿ ಅವರು ಪ್ರಧಾನಿ ಅಭ್ಯರ್ಥಿಯಾದಲ್ಲಿ ನರೇಂದ್ರ ಮೋದಿ ಅವರನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ಎಐಸಿಸಿ ಸಂಘಟನಾ ಉಸ್ತುವಾರಿ ಕೆಸಿ ವೇಣುಗೋಪಾಲ್ ಬೆಂಗಳೂರಿನಲ್ಲಿ ಹೇಳಿದರು.
ರಾಹುಲ್ ನಾಯಕತ್ವ ಅಗತ್ಯ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಮೊದಲ ವಿರೋಧ ಪಕ್ಷದ ಸಭೆಯಲ್ಲಿನ ಘಟನೆಯನ್ನು ಪ್ರಸ್ತಾಪಿಸಿರುವ ವೇಣುಗೋಪಾಲ್, "ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ರಾಹುಲ್ ಮದುವೆಯಾಗಲು ಸೂಚಿಸಿದರು. ಆಗ ಎಲ್ಲ ವಿರೋಧ ಪಕ್ಷದ ನಾಯಕರು ಬರಲಿದ್ದಾರೆ ಎಂದಿದ್ದರು. ಬಿಹಾರ ಮಾಜಿ ಸಿಎಂ ಅವರ ಈ ಹೇಳಿಕೆ, ಮದುವೆಗೆ ಸೀಮಿತವಾಗಿರದೇ, 2024 ರ ಸಂಸತ್ ಚುನಾವಣೆಗೆ ರಾಹುಲ್ ನಾಯಕತ್ವದ ಅಗತ್ಯದ ಸುಳಿವು ನೀಡುತ್ತದೆ" ಎಂದು ವ್ಯಾಖ್ಯಾನಿಸಿದ್ದಾರೆ.
ರಾಹುಲ್ ಗಾಂಧಿ ಉನ್ನತ ಹುದ್ದೆಗೆ ಅರ್ಹರು ಮಾತ್ರವಲ್ಲ, ಅವರ ಉಮೇದುವಾರಿಕೆಯು ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆಯಲು ಶಕ್ತಿ ತುಂಬಲಿದೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳು ಎಣಿಕೆಗೆ ಬರುವ ಕಾರಣ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ, ಎಲ್ಲಾ 543 ಲೋಕಸಭಾ ಸ್ಥಾನಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿ ನಿಸ್ಸಂಶಯವಾಗಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆಗ ಕಾಂಗ್ರೆಸ್‌ಗೇ ಪ್ರಧಾನಿ ಸ್ಥಾನ ಸಿಗುವುದು ಸಹಜ ಎಂದು ಹೇಳಿಕೆ ನೀಡಿದರು.
ಇದಲ್ಲದೇ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ರಾಹುಲ್ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಘೋಷಣೆಯಾಗಬಹುದು ಎಂದು ಕಾಂಗ್ರೆಸ್ ನಾಯಕರು ಊಹಿಸುತ್ತಿದ್ದಾರೆ.
ಮೋದಿ ಎದುರು ರಾಹುಲ್: ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಆಂಧ್ರಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸಿಡಿ ಮೇಯಪ್ಪನ್ ಅವರು ಈಚೆಗೆ ಮಾತನಾಡಿ, ರಾಹುಲ್ ಅವರು ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ್ ಜೋಡೋ ಯಾತ್ರೆಯಿಂದ ಅವರು ದೇಶದ ಅತ್ಯಂತ ಪ್ರಮುಖ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದಿದ್ದರು. ಇಂಥದ್ದೇ ಹೇಳಿಕೆ ನೀಡಿದ್ದ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು, ಪ್ರಧಾನಿ ಮೋದಿಯನ್ನು ಎದುರಿಸಲು, ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ವಿಪಕ್ಷಗಳ ಸಭೆ: ಬೆಂಗಳೂರಿಗೆ ಬಂದಿಳಿದ ಸೋನಿಯಾ, ರಾಹುಲ್, ಅಖಿಲೇಶ್, ಮಮತಾ ಸೇರಿ ಇನ್ನೂ ಹಲವು ಗಣ್ಯರು!