ಬೆಂಗಳೂರು: ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಜೀರ್ ಮದನಿ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ಮುಗಿಯುವವರೆಗೂ ಕೇರಳದಲ್ಲಿರುವ ತಮ್ಮ ಊರಿಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದ. ಕಳೆದ ಆರು ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮದನಿ ಈ ಅರ್ಜಿ ಸಲ್ಲಿಸಿದ್ದನು.
ಇದೀಗ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು, "ಅಬ್ದುಲ್ ನಜೀರ್ ಅಪಾಯಕಾರಿ ಮನುಷ್ಯ" ಎಂದಿದ್ದಾರೆ. ಈ ಬಳಿಕ ವಿಚಾರಣೆಗೆ ಬೇಕಾದ ಪ್ರಮುಖ ವಿಷಯಗಳನ್ನು ಪರಿಶೀಲಿಸುವಂತೆ ವಕೀಲ ಜಯಂತ್ ಭೂಷಣ್ ಅವರಿಗೆ ಸೂಚಿಸಿದ್ದಾರೆ.
ಸದ್ಯ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿಕೆ ಮಾಡಿದ್ದಾರೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮದನಿಗೆ 2014ರಲ್ಲಿ ಜಾಮೀನು ನೀಡಿತ್ತು. ಆದರೆ ಬೆಂಗಳೂರು ತೊರೆಯದಂತೆ ಆದೇಶಿಸಿತ್ತು. ಪರಿಣಾಮವಾಗಿ ಮದನಿ ಅಂದಿನಿಂದಲೂ ನಗರದಲ್ಲಿ ನೆಲೆಸಿದ್ದ. ಜಾಮೀನು ಷರತ್ತಿನ ಅವಧಿ ಮುಗಿದಿರುವುದರಿಂದ ಜಾಮೀನು ಷರತ್ತು ಸಡಿಲಗೊಳಿಸುವಂತೆ ಆತ ಮತ್ತೆ ಅರ್ಜಿ ಸಲ್ಲಿಸಿದ್ದಾನೆ.