ಹೈದರಾಬಾದ್: ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗಾಗಿ ಎಂಟನೇ ಹಾಗೂ ಕೊನೆಯ ಹಂತದ ಮತದಾನವು ಗುರುವಾರ ನಡೆಯಲಿದೆ. ಒಟ್ಟು 84,77,728 ಮತದಾರರು ತಮ್ಮ ಪರಮಾಧಿಕಾರ ಚಲಾಯಿಸಲಿದ್ದಾರೆ.
35 ವಿಧಾನ ಸಭಾ ಕ್ಷೇತ್ರಗಳಿಗೆ ಎಂಟನೇ ಹಂತದಲ್ಲಿ ಮತದಾನ ನಡೆಯಲಿದ್ದು, 283 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 35 ಮಹಿಳಾ ಅಭ್ಯರ್ಥಿಗಳಿದ್ದಾರೆ. 35 ವಿಧಾನ ಸಭಾ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳನ್ನು ರೆಡ್ ಅಲರ್ಟ್ ಕ್ಷೇತ್ರಗಳೆಂದು ಘೋಷಿಸಲಾಗಿದೆ. ಈ ಪ್ರತಿಯೊಂದು ರೆಡ್ ಅಲರ್ಟ್ ಕ್ಷೇತ್ರಗಳಲ್ಲಿ ಕನಿಷ್ಠವೆಂದರೂ 3 ರಿಂದ 4 ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎಂಟನೇ ಹಂತದ ಮತದಾನಕ್ಕಾಗಿ ಒಟ್ಟಾರೆ 11,860 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಪ್ರಜಾಪ್ರಭುತ್ವ ಸುಧಾರಣಾ ಒಕ್ಕೂಟ ಸಂಸ್ಥೆಯು ಕಲೆ ಹಾಕಿರುವ ಮಾಹಿತಿಯ ಪ್ರಕಾರ ಕಣದಲ್ಲಿರುವ 283 ಅಭ್ಯರ್ಥಿಗಳ ಪೈಕಿ 64 (ಶೇ 23) ಜನ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಯುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅದರಲ್ಲೂ ಈ 64 ಜನರ ಪೈಕಿ 50 ಜನರ ವಿರುದ್ಧ ಅತಿ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ಧಾಖಲಾಗಿವೆ.
ಸಿಪಿಐ (ಎಂ) ಪಕ್ಷದ 10 ಅಭ್ಯರ್ಥಿಗಳ ಪೈಕಿ 7 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.
ಮೇ 2 ರಂದು ಚುನಾವಣಾ ಫಲಿತಾಂಶ ಬರಲಿದ್ದು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ಯಾವುದೇ ವಿಜಯೋತ್ಸವ ನಡೆಸದಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.