ಬಂಕೂರ (ಪಶ್ಚಿಮ ಬಂಗಾಳ): ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಮುಖಂಡರೊಬ್ಬರ ಶವ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಂಕೂರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಈ ಘಟನೆಗೆ ವಿವಾಹೇತರ ಸಂಬಂಧ ಕಾರಣ ಎಂದು ಹೇಳಲಾಗಿದೆ. ಮತ್ತೊಂದೆಡೆ, ಇದು ಆತ್ಮಹತ್ಯೆ ಅಲ್ಲ. ಕೊಲೆಯಾಗಿದ್ದು, ಇದರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ.
ಮೃತರನ್ನು ಸುಭೋದೀಪ್ ಮಿಶ್ರಾ ಅಲಿಯಾಸ್ ದೀಪು (26) ಎಂದು ಗುರುತಿಸಲಾಗಿದೆ. ಗಂಗಾಜಲಘಾಟಿ ಪೊಲೀಸ್ ಠಾಣೆಯ ನಿಧಿರಾಂಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ಅವರ ಮನೆ ಸಮೀಪದ ಶಾಲಾ ಆವರಣದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಎರಡು ಕೈಗಳನ್ನೂ ಟವೆಲ್ನಿಂದ ಕಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಇದೊಂದು ಕೊಲೆ ಎಂಬ ಶಂಕೆ ಬಲವಾಗಿದೆ.
ಈ ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಪೊಲೀಸರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ವಿವಾಹಿತ ಮಹಿಳೆಯೊಂದಿಗೆ ದೀಪು ಪ್ರೇಮ ಸಂಬಂಧ ಹೊಂದಿದ್ದರು. ಮಹಿಳೆಯ ಮನೆಯವರಿಂದ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಕೊಲೆಯನ್ನು ಮಹಿಳೆಯ ಕಡೆಯವರೇ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಲೆಯಲ್ಲಿ ರಾಜಕೀಯ ಕೈವಾಡ ಆರೋಪ: ಮತ್ತೊಂದೆಡೆ, ಸುಭೋದೀಪ್ ಮಿಶ್ರಾ ಕೊಲೆಯಲ್ಲಿ ರಾಜಕೀಯ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ. ಟಿಎಂಸಿ ಗೂಂಡಾಗಳು ಸುಭೋದೀಪ್ ಮಿಶ್ರಾ ಅವರನ್ನು ಹತ್ಯೆಗೈದು ಕೈಗಳನ್ನು ಕಟ್ಟಿ ಮರಕ್ಕೆ ನೇತು ಹಾಕಿದ್ದಾರೆ. 2023ರ ಪಂಚಾಯತ್ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಟಿಎಂಸಿ ಕಳ್ಳರು ಮತ್ತು ಗೂಂಡಾಗಳು ಅವರ ಹೆಚ್ಚುತ್ತಿದ್ದ ಜನಪ್ರಿಯತೆ ಸಹಿಸಲು ಸಾಧ್ಯವಾಗದೇ ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುವೇಂದು ಅಧಿಕಾರಿ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿ, ಸಾವಿನಲ್ಲೂ ಬಿಜೆಪಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಟಿಎಂಸಿ ಹಿರಿಯ ನಾಯಕ, ಸಚಿವ ಶಶಿ ಪಂಜ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಯಲ್ಲಿ ಬಿಜೆಪಿಯ ಪಾತ್ರವೇನು?, ಅದು ಬಿಜೆಪಿ ಬೆಂಬಲಿಗರಾಗಿರಬಹುದು ಅಥವಾ ಟಿಎಂಸಿ ಬೆಂಬಲಿಗರಾಗಿರಬಹುದು. ಆದರೆ ಕುಟುಂಬ ಏನು ಹೇಳುತ್ತದೆ ಎಂಬುದನ್ನು ನಾವು ನೋಡಬೇಕು. ಕುಟುಂಬ ಸದಸ್ಯರು ಮತ್ತೊಂದು ಕುಟುಂಬದತ್ತ ಬೆರಳು ತೋರಿಸುತ್ತಿದ್ದಾರೆ. ಈ ಸಾವಿಗೆ ವೈಯಕ್ತಿಕ ಕಾರಣ ಎಂದು ಹೇಳುತ್ತಿದ್ದಾರೆ. ಸಾವು ಸಂಭವಿಸಿದ ಮರುಕ್ಷಣವೇ ಅಖಾಡಕ್ಕೆ ಧುಮುಕುವ ಬಿಜೆಪಿಯದ್ದು ರಣಹದ್ದು ರಾಜಕೀಯ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ದಿಶಾ ಆ್ಯಪ್ ಡೌನ್‌ಲೋಡ್ ವಿಚಾರವಾಗಿ ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ