ಕೋಲ್ಕತಾ: ಪಶ್ಚಿಮ ಬಂಗಾಳದ ಸರ್ಕಾರ ಉದ್ದೇಶಪೂರ್ವಕವಾಗಿ ಕೇಂದ್ರದ ಯೋಜನೆಗಳನ್ನ ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ಹಾಗೂ ನಿರುತ್ಸಾಹ ತೋರುವ ಮೂಲಕ ಮಂಕುಕವಿದ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಎಲ್ಲಾ ಅಭಿವೃದ್ಧಿ ಸೂಚ್ಯಂಕಗಳಲ್ಲಿ ನಮ್ಮ ರಾಜ್ಯವು ಉತ್ತಮ ಸಾಧನೆ ಮಾಡಿದೆ ಎಂದು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
ಕಳೆದ ವಾರ ಬಂಗಾಳಕ್ಕೆ ಭೇಟಿ ನೀಡಿದ ವೇಳೆ ಶಾ ಅವರು ನೀಡಿದ ಪ್ರತಿಪಾದನೆಯನ್ನ ತಳ್ಳಿ ಹಾಕಿರುವ ಬ್ಯಾನರ್ಜಿ ಪಾಯಿಂಟ್ - ಬೈ-ಪಾಯಿಂಟ್ ಎನ್‌ಸಿಆರ್‌ಬಿ ದತ್ತಾಂಶವನ್ನು ಉಲ್ಲೇಖಿಸಿ, ಕಳೆದ ಹತ್ತು ವರ್ಷಗಳಲ್ಲಿ ಟಿಎಂಸಿ ಆಳ್ವಿಕೆಯಲ್ಲಿ ರಾಜಕೀಯ ಹತ್ಯೆಗಳು ಮತ್ತು ಇತರ ಅಪರಾಧಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ.
ದೇಶದ ಗೃಹ ಸಚಿವರು ಹೇಳಿಕೆಗಳನ್ನು ನೀಡುವ ಮೊದಲು ಅದರ ದತ್ತಾಂಶಗಳು, ಸಂಗತಿಗಳು ಮತ್ತು ಅಂಕಿ - ಅಂಶಗಳನ್ನ ಅರಿತು - ತಿಳಿದು ಹೇಳಿಕೆ ನೀಡಬೇಕು. ಗೃಹ ಸಚಿವರಾದವರು ಇಂತಹ ಸುಳ್ಳು ಮಾಹಿತಿಯನ್ನ ನೀಡಬಾರದು ಎಂದರಲ್ಲದೇ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಬಂಗಾಳವು ಇತರ ರಾಜ್ಯಗಳಿಗಿಂತ ಮುಂದಿದೆ ಎಂದು ಟಕ್ಕರ್ ಕೊಟ್ಟಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೋಲ್ಕತ್ತಾಗೆ ಎರಡು ಬಾರಿ ದೇಶದ 'ಸುರಕ್ಷಿತ ನಗರ' ಟ್ಯಾಗ್ ನೀಡಲಾಗಿದೆ. "ಎನ್‌ಸಿಆರ್‌ಬಿ ಅಂಕಿ - ಅಂಶಗಳ ಪ್ರಕಾರ, ಟಿಎಂಸಿ ಆಳ್ವಿಕೆಯಲ್ಲಿ ರಾಜಕೀಯ ಹತ್ಯೆಗಳು, ಇತರ ಅಪರಾಧಗಳು ಮತ್ತು ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆ. ಬಿಜೆಪಿ ನಾಯಕರು ಇತರರತ್ತ ಬೆರಳು ತೋರಿಸುವ ಮುನ್ನ ಉತ್ತರಪ್ರದೇಶದಲ್ಲಿ ನಡೆದ ಹತ್ರಾಸ್ ಅತ್ಯಾಚಾರ-ಕೊಲೆ ಘಟನೆಯ ವಿರುದ್ಧವೂ ಮಾತನಾಡಬೇಕು" ಎಂದು ಬ್ಯಾನರ್ಜಿ ಹೇಳಿದರು.