ನವದೆಹಲಿ: ಗುಜರಾತ್ನ ಗೋಧ್ರೊತ್ತರ ಗಲಭೆಯ ಕುರಿತಾಗಿ ಬ್ರಿಟನ್ ಆಂಗ್ಲ ಮಾಧ್ಯಮ ಬಿಬಿಸಿ ಚಿತ್ರಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರವನ್ನು ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಪ್ರದರ್ಶಿಸುತ್ತಿದ್ದಾಗ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.
ಘಟನೆಯ ವಿವರ: ಬಿಬಿಸಿಯ ಈ ವಿವಾದಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ಎಲ್ಲಿಯೂ ಪ್ರದರ್ಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದಾಗ್ಯೂ ಹಲವೆಡೆ ನಿಯಮ ಮೀರಿ ಪ್ರದರ್ಶನ ಮಾಡಲಾಗುತ್ತಿದೆ. ನಿನ್ನೆಯಷ್ಟೇ ಹೈದರಾಬಾದ್ನ ಕೇಂದ್ರೀಯ ವಿವಿ, ಕೇರಳದ ಕಾಲೇಜೊಂದರಲ್ಲಿ ಚಿತ್ರ ಪ್ರದರ್ಶನ ನಡೆಸಲಾಗಿತ್ತು. ಬಳಿಕ ಜೆಎನ್ಯುನಲ್ಲಿ ಅನುಮತಿರಹಿತ ಪ್ರದರ್ಶನಕ್ಕೆ ವಿದ್ಯಾರ್ಥಿಗಳ ಒಕ್ಕೂಟವೊಂದು ಮುಂದಾದಾಗ, ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇಂಟರ್ನೆಟ್, ವಿದ್ಯುತ್ ಕಡಿತ: ಒಕ್ಕೂಟದ ಕೆಲವು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗಲಭೆಯ ಕುರಿತಾದ ಆಕ್ಷೇಪಾರ್ಹ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಬಯಸಿದ್ದರು. ಆದರೆ ವಿವಿ ಆಡಳಿತ ಮಂಡಳಿ ಇದಕ್ಕೆ ಅನುಮತಿ ನಿರಾಕರಿಸಿತ್ತು. ಅಲ್ಲದೇ, ವಿವಿಯಲ್ಲಿ ಅಂತಹ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಿತ್ತು. ಹೀಗಿದ್ದರೂ ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದರು. ಇದರಿಂದ ವಿವಿಯಲ್ಲಿ ಸಂಘರ್ಷ ಭುಗಿಲೇಳುವ ಕಾರಣ, ಇಂಟರ್ನೆಟ್ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸತ್ಯ ಯಾವತ್ತಿದ್ದರೂ ಹೊರಬರುತ್ತದೆ: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ಅಲ್ಲದೇ, ನಿಯಮ ಮೀರಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಿದರೆ, ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿತ್ತು. ಇಷ್ಟಾದರೂ, ವಿದ್ಯಾರ್ಥಿಗಳು ಜೆಎನ್‌ಯುಎಸ್‌ಯು ಬ್ಯಾನರ್‌ನಡಿಯಲ್ಲಿ ಮಂಗಳವಾರ ರಾತ್ರಿ 9 ಗಂಟೆಗೆ ಸಾಕ್ಷ್ಯಚಿತ್ರದ ಪ್ರದರ್ಶನಕ್ಕಾಗಿ ಕರಪತ್ರಗಳನ್ನು ಹಂಚಿದ್ದಾರೆ. ವಿದ್ಯುತ್, ಇಂಟರ್ನೆಟ್ ಸಂಪರ್ಕ ಕಡಿತ ಮಾಡಿದಾಗ್ಯೂ ವಿದ್ಯಾರ್ಥಿಗಳು ವಿವಿಯಲ್ಲಿ ತಮ್ಮಲ್ಲಿನ ಲ್ಯಾಪ್ಟಾಪ್, ಮೊಬೈಲ್ಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿದರು ಎಂದು ತಿಳಿದು ಬಂದಿದೆ.
ಎಬಿವಿಪಿ ಸ್ವಾಗತ: "ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಜೆಎನ್‌ಯು ಆಡಳಿತ ಮಂಡಳಿಯಿಂದ ಪೂರ್ವಾನುಮತಿ ನೀಡದಿರುವುದನ್ನು ಎಬಿವಿಪಿಯ ಜೆಎನ್‌ಯು ಘಟಕ ಶ್ಲಾಘಿಸಿದೆ. ಪ್ರದರ್ಶನವನ್ನು ನಿಲ್ಲಿಸುವ ಸೂಚನೆಗಳನ್ನು ವಿದ್ಯಾರ್ಥಿಗಳ ಸಂಘ ಸ್ವಾಗತಿಸುತ್ತದೆ" ಎಂದು ಎಬಿವಿಪಿಯ ಜೆಎನ್‌ಯು ಘಟಕದ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದರು. "ಬಿಬಿಸಿಯು ನಕಲಿ ಅಜೆಂಡಾದೊಂದಿಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸುವ ಮೂಲಕ ಭಾರತದ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಪ್ರಧಾನಿ ಮತ್ತು ದೇಶದ ವಿರುದ್ಧ ಸಾಕ್ಷ್ಯಚಿತ್ರ ರೂಪಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ" ಎಂದು ಟೀಕಿಸಿದ್ದಾರೆ.
'ಕಲ್ಲು ತೂರಾಟ ನಡೆದಿಲ್ಲ': "ಜೆಎನ್ಯುನಲ್ಲಿ ಯಾವುದೇ ಕಲ್ಲು ತೂರಾಟದ ಘಟನೆ ನಡೆದಿಲ್ಲ. ಈ ಬಗ್ಗೆ ಯಾವುದೇ ದೂರು ಕೂಡ ದಾಖಲಾಗಿಲ್ಲ. ಇದುವರೆಗೆ ಅಂತಹ ಯಾವುದೇ ಘಟನೆ ನಡೆದ ಬಗ್ಗೆಯೂ ವರದಿಯಾಗಿಲ್ಲ. ಜೆಎನ್‌ಯುನ ಯಾವುದೇ ವಿಭಾಗದಿಂದ ನಾವು ದೂರು ಬಂದರೂ, ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಪೊಲೀಸರು ತಿಳಿಸಿದರು.
ಬಿಬಿಸಿ ಸಾಕ್ಷ್ಯಚಿತ್ರದಲ್ಲೇನಿದೆ?: ಪ್ರಧಾನಿ ಮೋದಿ ಕುರಿತಾಗಿ ಆಕ್ಷೇಪಾರ್ಹ ಅಂಶಗಳು ಇರುವ ಕಾರಣ ಬಿಬಿಸಿಯ ಸಾಕ್ಷ್ಯಚಿತ್ರವನ್ನು ದೇಶದಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಅಲ್ಲದೇ, ಅದರ ಎಲ್ಲ ಲಿಂಕ್ಗಳನ್ನು ಹಂಚಿಕೊಳ್ಳದಂತೆ ಸೂಚಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಲಿಂಕ್ಗಳನ್ನು ಅಳಿಸುವಂತೆ ಸೂಚನೆ ನೀಡಲಾಗಿದೆ.
ರಾಹುಲ್ ಗಾಂಧಿ ಪ್ರತಿಕ್ರಿಯೆ: ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯ ಯಾವತ್ತಿಗಾದರೂ ಹೊರಗೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ. ಮಾಧ್ಯಮ, ಸಾಂವಿಧಾನಿಕ ಸಂಸ್ಥೆಗಳನ್ನು ಹೊಸಕಿ ಹಾಕಿದರೂ ಸತ್ಯ ಮಾತ್ರ ಹೊರಬರಲೇಬೇಕು ಎಂದು ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ