ನವದೆಹಲಿ: ಭಾರತಕ್ಕೆ ಕೊರೊನಾ ವೈರಸ್ ಕಾಲಿಟ್ಟು ಎರಡು ವರ್ಷಗಳು ಸಂದಿವೆ. ಕೋವಿಡ್ 3ನೇ ಅಲೆಯಲ್ಲಿ ದೇಶ ತತ್ತರಿಸುತ್ತಿರುವ ಈ ವೇಳೆಯಲ್ಲಿ ನಾಳೆಯಿಂದ 2022 - 23ನೇ ಸಾಲಿನ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜರ್ಜರಿತರಾಗಿರುವ ಸಾಮಾನ್ಯ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಾಳುಗಳು, ಮಸಾಲೆ ಪದಾರ್ಥಗಳು, ಖಾದ್ಯ ತೈಲ ಸೇರಿದಂತೆ ಆಹಾರ ಪದಾರ್ಥಗಳು, ಪ್ರಯಾಣ ದರ, ಬಟ್ಟೆ, ಶಿಕ್ಷಣ, ವಸತಿ ವೆಚ್ಚ ಕಡಿಮೆಯಾಗಬಹುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತೆರಿಗೆಗಳು ಮತ್ತು ಇಂಧನ ದರಗಳಲ್ಲಿ ಕಡಿತವಾಗಬಹುದು, ಪಿಂಚಣಿ ಹೆಚ್ಚಾಗಬಹುದು, ಉದ್ಯೋಗಕ್ಕೆ ಉತ್ತೇಜನ ನೀಡಬಹುದು ಎಂದು ಜನರು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಬಹು ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಜನರು ಬಯಸಿದ್ದಾರೆ. ವೈದ್ಯಕೀಯ ವೆಚ್ಚ ಹಾಗೂ ಔಷಧ ಬೆಲೆಗಳಲ್ಲಿ ಇಳಿಕೆಯಾಗಿರಬಹುದು ಎಂದು ಭಾವಿಸಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಎಷ್ಟೋ ಜನರು ಆಸ್ಪತ್ರೆಯ ಬೆಡ್ ಚಾರ್ಜ್ ಹಾಗೂ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕ್ರೌಡ್ ಫಂಡಿಂಗ್ ಮೊರೆ ಹೋದ ಉದಾಹರಣೆಗಳೂ ನಮ್ಮ ಮುಂದಿದೆ.
ಇದನ್ನೂ ಓದಿ: Budget 2022: ಈ ಸಲವೂ ಕಾಗದ ರಹಿತ ಬಜೆಟ್, ಮೊಬೈಲ್ ಅಪ್ಲಿಕೇಶನ್ನಲ್ಲೂ ಲಭ್ಯ
ಸಾಮಾನ್ಯ ಜೀವನಕ್ಕೆ ಅಗತ್ಯವಿರುವ ಮೂಲಭೂತ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದು ನಾಳಿನ ಅಧಿವೇಶನದ ಚರ್ಚೆಯ ಪ್ರಮುಖ ವಿಷಯವಾಗಿರಲಿದೆ. ಕುಸಿದಿರುವ ಆರ್ಥಿಕತೆಗೆ ಚೇತರಿಕೆ ಸಿಗಬಹುದೇ ಎಂಬುದು ಎಲ್ಲರ ಮನಸ್ಸಿನಲ್ಲೆದ್ದಿರುವ ಪ್ರಶ್ನೆಯಾಗಿದೆ.
ಈ ಬಾರಿಯ ಬಜೆಟ್ ಸಂಬಂಧಿತ ಕೆಲ ಅಂಶಗಳು ಹೀಗಿವೆ..
1) ಕಳೆದ ವರ್ಷದಂತೆ ಈ ಸಲದ ಬಜೆಟ್ ಕೂಡ ಕಾಗದ ರಹಿತವಾಗಿ ಮಂಡನೆಯಾಗಲಿದೆ. ಆದರೆ, ಡಿಜಿಟಲ್ ರೂಪಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ. 'ಯೂನಿಯನ್ ಬಜೆಟ್' ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಶನ್ ಲಭ್ಯವಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇದನ್ನ ಅಭಿವೃದ್ಧಿಪಡಿಸಿದೆ. ಸಂಸತ್ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಇದು ಲಭ್ಯವಾಗಲಿದೆ.
2) ಎರಡೂ ಸದನಗಳು ಪ್ರತಿ ಸೆಷನ್‌ಗೆ ಒಂದು ಗಂಟೆಯಂತೆ 27 ಅಧಿವೇಶನಗಳಲ್ಲಿ ಸದಸ್ಯರು ಕುಳಿತುಕೊಳ್ಳಲಿದ್ದಾರೆ.
3) ಅಧಿವೇಶನದ ಮೊದಲ ದಿನ, ಅಂದರೆ ನಾಳೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
4) ಎರಡನೇ ದಿನ 2022-23ರ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
5) ಬಜೆಟ್ ಅಧಿವೇಶನದ ಮೊದಲ ಭಾಗವು, ಅಂದರೆ 10 ಅಧಿವೇಶನಗಳು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯಲಿವೆ. ಮಾರ್ಚ್ 14 ಮತ್ತು ಏಪ್ರಿಲ್ 8 ರ ನಡುವೆ ಎರಡನೇ ಭಾಗ (ಉಳಿದ 19 ಅಧಿವೇಶನಗಳು) ನಿಗದಿಪಡಿಸಲಾಗಿದೆ.
6) ರಾಜ್ಯಸಭೆಯು ಶೂನ್ಯ ಅವಧಿಯನ್ನು ದಿನಕ್ಕೆ 30 ನಿಮಿಷಕ್ಕೆ ಕಡಿಮೆ ಮಾಡಿದ್ದು, ಒಟ್ಟು 13 ಗಂಟೆ 30 ನಿಮಿಷವನ್ನು ಇಡೀ ಅಧಿವೇಶನಕ್ಕೆ ಮೀಸಲಿಡಲಾಗಿದೆ.
7) ಈ ಬಜೆಟ್ ಅಧಿವೇಶನವು ಜನವರಿ 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿದ ನಂತರ ನಡೆಯಲಿರುವ ಆರನೆಯ ಅಧಿವೇಶನವಾಗಿದೆ.
8) ಈ ಬಾರಿಯ ಬಜೆಟ್ ಅಧಿವೇಶನದ ಕಾರ್ಯಸೂಚಿಯನ್ನು ಚರ್ಚಿಸಲು ರಾಜ್ಯಸಭೆಯ ಚೇರ್ಮನ್ ಎಂ ವೆಂಕಯ್ಯ ನಾಯ್ಡು ಅವರು ನಾಳೆ ಸಂಜೆ 5 ಗಂಟೆಗೆ ಪಕ್ಷಗಳು ಮತ್ತು ಹಲವು ನಾಯಕರ ವರ್ಚುವಲ್ ಸಭೆಯನ್ನು ಕರೆದಿದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ