ಬಠಿಂಡಾ (ಪಂಜಾಬ್): ಇಲ್ಲಿನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರಿಂದ ಬಂಧನಕ್ಕೊಳಗಾದ ಸೇನಾ ಸಿಬ್ಬಂದಿಯೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ವೈಯಕ್ತಿಕ ದ್ವೇಷದಿಂದಾಗಿ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಸೇನಾಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಫಿರಂಗಿ ಘಟಕದ ಗನ್ನರ್ ದೇಸಾಯಿ ಮೋಹನ್ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಾತ. ಸೇನೆಗೆ ಸೇರಿದ ಇನ್ಸಾಸ್(ಐಎನ್‌ಎಸ್‌ಎಎಸ್) ರೈಫಲ್ ಅನ್ನು ಕದ್ದು ಅದರಿಂದಲೇ ನಾಲ್ವರನ್ನು ಹತ್ಯೆ ಮಾಡಿದ್ದಾಗಿ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೋಹನ್ನನ್ನು ಕೆಲ ದಿನಗಳ ಹಿಂದೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ವೈಯಕ್ತಿಕ ಕಾರಣಗಳು ಅಥವಾ ದ್ವೇಷದಿಂದಾಗಿ ಗುಂಡಿನ ದಾಳಿ ನಡೆಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಮೋಹನ್ ನೀಡಿದ ಹೇಳಿಕೆಯಂತೆ, ಏಪ್ರಿಲ್ 9 ರಂದು ಗುಂಡುಗಳಿಂದ ತುಂಬಿದ್ದ ಇನ್ಸಾಸ್ ರೈಫಲ್ ಜೊತೆಗೆ ಕೆಲ ಶಸ್ತ್ರಾಸ್ತ್ರವನ್ನು ಕದ್ದು ಬಚ್ಚಿಟ್ಟಿದ್ದ. ಏಪ್ರಿಲ್ 12ರಂದು ಮುಂಜಾನೆ 4.30ರ ಸುಮಾರಿಗೆ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಮೊದಲ ಮಹಡಿಗೆ ತೆರಳಿ ನಿದ್ರೆಯಲ್ಲಿದ್ದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.
ನಂತರ ಆರೋಪಿ ಮೋಹನ್ ರೈಫಲ್ ಅನ್ನು ಯಾರಿಗೂ ಗೊತ್ತಾಗದಂತೆ ಚರಂಡಿಯ ಗುಂಡಿಗೆ ಎಸೆದಿದ್ದಾನೆ. ಗುಂಡಿನ ದಾಳಿಯ ವೇಳೆ ಕರ್ತವ್ಯದಲ್ಲಿದ್ದ ದೇಸಾಯಿ ಮೋಹನ್ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದರು ಎಂದು ಹೇಳಿಕೆ ನೀಡಿ ತನಿಖೆಯ ದಾರಿ ತಪ್ಪಿಸಿದ್ದ. ಇದನ್ನು ಪೊಲೀಸರು ಎಫ್ಐಆರ್ನಲ್ಲಿ ದಾಖಲಿಸಿದ್ದರು.
ಇದನ್ನೂ ಓದಿ: ಬಠಿಂಡಾ ಸೇನಾ ನೆಲೆಯಲ್ಲಿ ಮತ್ತೊಬ್ಬ ಯೋಧ ಸಾವು: ಕಾಣೆಯಾಗಿದ್ದ ರೈಫಲ್ ಬಗ್ಗೆ ತನಿಖೆ
ಸೇನಾ ನೆಲೆಯನ್ನು ಜಾಲಾಡಿದ ವೇಳೆ ಕೊಳಚೆ ಗುಂಡಿಯಿಂದ ಸೇನಾ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಇನ್ಸಾಸ್ ರೈಫಲ್ ಸಿಕ್ಕಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ದೇಸಾಯಿ ಮೋಹನ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಸದ್ಯ ಆರೋಪಿ ಮೋಹನ್ ಪೊಲೀಸ್ ವಶದಲ್ಲಿದ್ದು, ಇನ್ನೂ ಹೆಚ್ಚಿನ ವಿವರಗಳನ್ನು ಪಡೆಯಲಾಗುತ್ತಿದೆ. "ವರದಿಗಳಲ್ಲಿ ಭಿತ್ತರವಾದಂತೆ ಗುಂಡಿನ ದಾಳಿ ಭಯೋತ್ಪಾದಕ ಸಂಚಲ್ಲ. ಸೇನಾ ಸಿಬ್ಬಂದಿ ಮಧ್ಯೆ ನಡೆದ ಚಕಮಕಿಯಾಗಿದೆ. ಭಾರತೀಯ ಸೇನೆ ಇಂತಹ ಅಶಿಸ್ತಿನ ಕೃತ್ಯಗಳಿಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಪಂಜಾಬ್ ಪೊಲೀಸ್ ಮತ್ತು ಇತರ ಏಜೆನ್ಸಿಗಳಿಗೆ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸೇನೆ ಹೇಳಿಕೆ ನೀಡಿದೆ.
ಅಂದು ಏನಾಗಿತ್ತು?: ಏಪ್ರಿಲ್ 12 ರಂದು ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ಮೊರೆತ ಕೇಳಿಬಂದಿತ್ತು. ದಾಳಿಯಲ್ಲಿ ನಾಲ್ವರು ಸೇನಾ ಯೋಧರು ನಿದ್ರಾವಸ್ಥೆಯಲ್ಲಿ ಸಾವನ್ನಪ್ಪಿದ್ದರು. ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಮೃತರಾಗಿದ್ದು, ಇವರು ಕರ್ನಾಟಕ, ತಮಿಳುನಾಡಿಗೆ ಸೇರಿದವರಾಗಿದ್ದಾರೆ.
ಕರ್ತವ್ಯದ ಮುಗಿಸಿದ ಬಳಿಕ ಅವರು ತಮ್ಮ ಕೊಠಡಿಗಳಲ್ಲಿ ಮಲಗಿದ್ದರು. ಈ ವೇಳೆ ರೈಫಲ್ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ನಾಲ್ವರೂ ಅವರ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು.
ಸೇನೆಗೆ ಸೇರಿದ ಐಎನ್‌ಎಸ್‌ಎಎಸ್ ರೈಫಲ್ ಮತ್ತು 28 ಮದ್ದುಗುಂಡುಗಳು ಸ್ಥಳದಲ್ಲಿ ಸಿಕ್ಕಿದ್ದವು. ಈ ಘಟನೆಯ ಹಿಂದೆ ಸೇನಾ ಸಿಬ್ಬಂದಿ ಇರಬಹುದು ಎಂದು ಶಂಕಿಸಲಾಗಿತ್ತು. ಪ್ರದೇಶವನ್ನು ಸುತ್ತುವರಿದು, ಸೇನೆಯು ಪಂಜಾಬ್ ಪೊಲೀಸರೊಂದಿಗೆ ಜಂಟಿ ತನಿಖೆ ನಡೆಸಿತ್ತು.
ಇದನ್ನೂ ಓದಿ: ಬಠಿಂಡಾ ಮಿಲಿಟರಿ ಠಾಣೆ ಮೇಲೆ ದಾಳಿ ಘಟನೆ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಯೋಧರು ಸಾವು