ನವದೆಹಲಿ: ಸರ್ಕಾರದ ಖಾಸಗೀಕರಣ ಯೋಜನೆಗಳನ್ನು ವಿರೋಧಿಸಿ, ಬ್ಯಾಂಕ್ ಒಕ್ಕೂಟಗಳು ಇಂದು ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ ನಡೆಸಿದವು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ತಿಂಗಳು ಸಂಸತ್ತಿನತ್ತ ಮೆರವಣಿಗೆ ನಡೆಸಲು ಯೋಜಿಸಿದ್ದೇವೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ತಿಂಗಳ ಆರಂಭದಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಯೋಜನೆ ಪ್ರಕಟಿಸಿದರು.
ಒಂಬತ್ತು ಒಕ್ಕೂಟಗಳಾದ ಎಐಬಿಇಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಎಫ್‌ಐ, ಇನ್‌ಬೆಫ್, ಐಎನ್‌ಬಿಒಸಿ, ಎನ್‌ಒಬಿಡಬ್ಲ್ಯೂ, ನೊಬೊಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಯೂನಿಯನ್‌ಗಳ ಬ್ಯಾನರ್ ಅಡಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಸರ್ಕಾರದ ಪ್ರಸ್ತಾಪದ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ ಎಂದು ಎಐಬಿಇಎ ಹೇಳಿಕೆಯಲ್ಲಿ ತಿಳಿಸಿದೆ.
"ಬೇಡಿಕೆ ಈಡೇರಿಸದಿದ್ದಲ್ಲಿ ಮಾರ್ಚ್ 10ರಂದು ನಾವು ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸುತ್ತೇವೆ" ಎಂದು ಎಐಬಿಇಎ ತಿಳಿಸಿದೆ.