ಸೋಲನ್(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಪುತ್ರಿ ಖ್ಯಾತ ಪರ್ವತಾರೋಹಿ ಬಲ್ಜೀತ್ ಕೌರ್ ಅವರು ಅನ್ನಪೂರ್ಣ ಶಿಖರದ ಕ್ಯಾಂಪ್ 4 ರಲ್ಲಿ ನಾಪತ್ತೆಯಾಗಿದ್ದು, ನಿಧನರಾಗಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಬಲ್ಜಿತ್ ಕೌರ್ ಅವರು ಜೀವಂತರಾಗಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಲ್ಜಿತ್ ಕೌರ್ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಮಾಮ್ಲಿಗ್ ಪ್ರದೇಶದ ನಿವಾಸಿಯಾಗಿದ್ದು, ಕಡಿಮೆ ಸಮಯದಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದ ಭಾರತದ ಹೆಮ್ಮೆಯ ಆರೋಹಿಯಾಗಿದ್ದಾರೆ. ಬಲ್ಜೀತ್ ಕೌರ್ ಶಿಖರ ಸ್ಥಳದಿಂದ ಇಳಿಯುವಾಗ ಕಣ್ಮರೆ ಆಗಿದ್ದಾರೆ ಎಂದು ಹಿಮಾಚಲ ಪ್ರದೇಶದ ಆರೋಗ್ಯ ಸಚಿವ ಕರ್ನಲ್ ಡಾ ಧನಿ ರಾಮ್ ಶಾಂಡಿಲ್ ಅವರು ಮಾಹಿತಿ ನೀಡಿದ್ದರು.
ಆದರೆ, ವೈಮಾನಿಕ ಸಮೀಕ್ಷಾ ತಂಡಗಳು ಆಕೆ ಜೀವಂತವಾಗಿರುವುದನ್ನು ಪತ್ತೆ ಹಚ್ಚಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈ ಕುರಿತು ಯಾತ್ರಾ ಸಂಘಟಕರು ಕೂಡಾ ಸ್ಪಷ್ಟಪಡಿಸಿದ್ದು, 27 ವರ್ಷದ ಕೌರ್ ಶಿಖರದಿಂದ ಇಳಿಯುತ್ತಿರುವಾಗ ಅನ್ನ ಪೂರ್ಣ ಮೌಂಟ್ 4 ನೇ ಕ್ಯಾಂಪ್ ಬಳಿಯಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಒಂದು ದಿನದ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಸಲಾಗುತ್ತಿದೆ.
ಇವರಲ್ಲದೇ, ಪಯೋನೀರ್ ಅಡ್ವೆಂಚರ್ ಪಸಾಂಗ್ ಶೆರ್ಪಾ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರದಂದು ಪೂರಕ ಆಮ್ಲಜನಕವನ್ನು ಬಳಸದೆಯೇ ವಿಶ್ವದ 10 ನೇ ಅತಿ ಎತ್ತರದ ಶಿಖರವನ್ನು ಏರಿದ ಕೌರ್ ಅವರನ್ನು ವೈಮಾನಿಕ ಶೋಧ ತಂಡ ಪತ್ತೆ ಮಾಡಿದೆ ಎಂದು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮದ ವರದಿಯೊಂದು ಉಲ್ಲೇಖಿಸಿದೆ. ಕೌರ್ ಅವರನ್ನು ಪತ್ತೆ ಹಚ್ಚಿದ್ದು, ಹೈ ಕ್ಯಾಂಪ್‌ನಿಂದ ಏರ್ಲಿಪ್ಟ್ ಮಾಡಲು ತಯಾರಿ ನಡೆಸುತ್ತಿದ್ದೇವೆ. ಶೆರ್ಪಾ ಅಧ್ಯಕ್ಷರ ಪ್ರಕಾರ ವೈಮಾನಿಕ ಶೋಧ ತಂಡವು ಕ್ಯಾಂಪ್ 4ರ ಕಡೆಗೆ ಕೌರ್ ಏಕಾಂಗಿಯಾಗಿ ಇಳಿಯುತ್ತಿರುವುದನ್ನು ಗಮನಿಸಿದ್ದಾರೆ.
ಕೌರ್ ಅವರು ಶಿಖರದ ಬಿಂದುವಿನಿಂದ ಕೆಳಗೆ ಏಕಾಂಗಿಯಾಗಿದ್ದು, ಇಂದ ಬೆಳಗ್ಗಿನವರೆಗೂ ಸಂಪರ್ಕಕ್ಕೆ ಸಿಗದೇ ಹೊರಗುಳಿದಿದ್ದರು ಎಂದು ಶೋಧ ತಂಡದ ವರದಿ ತಿಳಿಸಿದೆ. ಆದರೆ, ಇಂದು ಅವರ ರೇಡಿಯೋ ಸಿಗ್ನಲ್ ದೊರಕಿದ್ದು, ಅದರಲ್ಲಿ ಕೌರ್ ತಕ್ಷಣವೇ ಸಹಾಯ ಬೇಕಾಗಿದೆ ಎಂದು ಸಂದೇಶ ರವಾನಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ವೈಮಾನಿಕ ಶೋಧ ತಂಡ ರಕ್ಷಣಾ ಕಾರ್ಯಚರಣೆಯನ್ನು ತೀವ್ರಗೊಳಿಸಿದೆ.
ಇನ್ನು ಅವರ GPS ಸ್ಥಳವು 7,375m (24,193ft) ಎತ್ತರವನ್ನು ಸೂಚಿಸಿದೆ. ಕೌರ್, ನಿನ್ನೆ ಸಂಜೆ 5.15 ರ ಸುಮಾರಿಗೆ ಇಬ್ಬರು ಶೆರ್ಪಾ ಗೈಡ್‌ಗಳೊಂದಿಗೆ ಅನ್ನಪೂರ್ಣ ಪರ್ವತವನ್ನು ಏರಿದ್ದರು. ಆದರೆ, ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಮೂರು ಹೆಲಿಕಾಪ್ಟರ್‌ಗಳು ಕಾರ್ಯಚರಣೆ ಕೈಗೊಂಡಿವೆ.
ಕೌರ್ ಅಲ್ಲದೇ ಈ ದಂಡಯಾತ್ರೆಯಲ್ಲಿ ಬಲ್ಜೀತ್ ಕೌರ್ ಜೊತೆಗಿದ್ದ ರಾಜಸ್ಥಾನದ ಕಿಶಾಂಗಢ್ ನಿವಾಸಿ ಅನುರಾಗ್ ಮಾಲೂ ಕೂಡ ಮೌಂಟ್ ಅನ್ನಪೂರ್ಣ III ಕ್ಯಾಂಪ್‌ನಿಂದ ಇಳಿಯುವಾಗ ನಾಪತ್ತೆಯಾಗಿದ್ದರು. ನಂತರ ಅವರು 6,000 ಮೀಟರ್‌ನಿಂದ ಬಿರುಕಿಗೆ ಬಿದ್ದು ಮಾಲೂ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಮೌಂಟ್ ಅನ್ನಪೂರ್ಣವು ಸಮುದ್ರ ಮಟ್ಟದಿಂದ 8,091 ಮೀಟರ್ ಎತ್ತರದಲ್ಲಿರುವ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದೆ.
ಇದನ್ನೂ ಓದಿ: ಚಾಕುವಿಗೆ ಸಿಲುಕಿ ಸಾವಿನ ದವಡೆಯಿಂದ ಬಾಲಕ ಪಾರು, ಕೋತಿಗಳ ರೂಪದಲ್ಲಿ ಕೊನೆಗೂ ಬಿಡದ ಸಾವು