ಪ್ರಯಾಗರಾಜ್(ಉತ್ತರಪ್ರದೇಶ): ಮಹಾಂತ ನರೇಂದ್ರ ಗಿರಿ ನಿಧನದ ನಂತರ ಅವರ ಇಚ್ಛೆಯಂತೆಯೇ ಮಠಕ್ಕೆ ಬಲಬೀರ್ ಗಿರಿಯವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು ಎಂದು ವಕೀಲ ರಿಷಿ ಶಂಕರ್ ದ್ವಿವೇದಿ ಮಾಹಿತಿ ನೀಡಿದ್ದಾರೆ.
ಮಠದ ನಿಯಮಗಳ ಪ್ರಕಾರ, ಮಹಾಂತ್ ನರೇಂದ್ರ ಗಿರಿಯವರ ಇಚ್ಛೆಯಂತೆಯೇ, ಸಿಬಿಐ ತನಿಖೆ ಬಳಿಕ ಬಲಬೀರ್ ಗಿರಿಯನ್ನು ಉತ್ತರಾಧಿಕಾರಿನ್ನಾಗಿ ನೇಮಿಸಲಾಗುವುದು ಎಂದು ದ್ವಿವೇದಿ ಹೇಳಿದರು.
ಮಹಾಂತ್ ಗಿರಿ 2010 ರಲ್ಲಿ ಬಲಬೀರ್ ಗಿರಿಯವರನ್ನು ಉತ್ತರಾಧಿಕಾರಿಯಾಗಿ ನೇಮಿಸಲು ಇಚ್ಛಿಸಿದ್ದರು. ಬಳಿಕ 2011 ರಲ್ಲಿ ಶಿಷ್ಯ ಆನಂದ್ಗಿರಿಯರನ್ನು ನೇಮಿಸಲು ಮುಂದಾದರು. ಅಂತಿಮವಾಗಿ 2020 ರಲ್ಲಿ ಬಲಬೀರ್ಗಿರಿಯವರೇ ಉತ್ತರಾಧಿಕಾರಿ ಆಗಬೇಕೆಂದು ಮಹಾಂತ್ ಬಯಸಿದ್ದರು ಎಂದು ವಕೀಲ ರಿಷಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಂತ ಗಿರಿ ಸಾವಿನ ಬಳಿಕ ವಿಡಿಯೋ ಚಿತ್ರೀಕರಣ.. ಹಲವು ಅನುಮಾನ: ಸಿಬಿಐ ಹೆಗಲಿಗೆ ತನಿಖೆ!
ಸೆಪ್ಟೆಂಬರ್ 21 ರಂದು ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಸೂಸೈಡ್ ನೋಟ್ ಕೂಡ ಸಿಕ್ಕಿತ್ತು.
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಇದರ ಭಾಗವಾಗಿ ಸಿಬಿಐ ತಂಡ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ.