ನವದೆಹಲಿ : ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ. ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮೊಹಂತಾ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಅವರನ್ನು ಸಿಆರ್‌ಪಿಸಿಯ ಸೆಕ್ಷನ್ 304 ಮತ್ತು 201 ರ ಅಡಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಆರೋಪಿ ರೈಲ್ವೇ ನೌಕರರು ಸಾಕ್ಷ್ಯಾಧಾರಗಳ ತಿರುಚುವಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಬಂಧಿತ ಆರೋಪಿಗಳನ್ನು ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆರೋಪಿಗಳನ್ನು ವಿಚಾರಣೆಗಾಗಿ ತನ್ನ ಕಸ್ಟಡಿಗೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಲಿದೆ. ರೈಲ್ವೇ ಮಂಡಳಿಯು ಅಪಘಾತದ ಬಗ್ಗೆ ಕೇಂದ್ರೀಯ ತನಿಖಾ ದಳದ ತನಿಖೆಗೆ ಶಿಫಾರಸು ಮಾಡಿದ್ದು, ಜೂನ್ 6 ರಂದು ಸಿಬಿಐ ತನಿಖೆ ವಹಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. ಅಪಘಾತದ ನಂತರ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್ ಅನ್ನು ಟ್ಯಾಂಪರಿಂಗ್ ಮಾಡಿದ ಆರೋಪದ ನಂತರ ಸಂಸ್ಥೆ ಈ ಪ್ರಕರಣದಲ್ಲಿ ತನಿಖೆ ಆರಂಭಿಸಿತ್ತು. ಜೂನ್ 2 ರಂದು ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾಕ್ಕೆ ತೆರಳುತ್ತಿದ್ದ ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳನ್ನು ಒಳಗೊಂಡ ತ್ರಿವಳಿ ರೈಲು ಅಪಘಾತದ ದುರಂತ ಘಟನೆಯು 291 ಜನರನ್ನು ಬಲಿ ಪಡೆದಿತ್ತು ಮತ್ತು 1000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಜೂನ್ 2 ರಂದು ಬಾಲಸೋರ್ ಬಳಿ ಸಂಭವಿಸಿದ ರೈಲು ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್)ರು ನಡೆಸಿದ ತನಿಖೆಯು ಬಹು ಹಂತಗಳಲ್ಲಿ ಲೋಪವಾಗಿರುವುದನ್ನು ಎತ್ತಿ ತೋರಿಸಿತ್ತು. ಲೆವೆಲ್ ಕ್ರಾಸಿಂಗ್ ಲೊಕೇಶನ್ ಬಾಕ್ಸ್‌ನೊಳಗೆ ತಂತಿಗಳ ತಪ್ಪು ಲೇಬಲ್ ಅನ್ನು ವರ್ಷಗಳವರೆಗೆ ಪತ್ತೆಹಚ್ಚಲಾಗಿಲ್ಲ ಮತ್ತು ಅಂತಿಮವಾಗಿ ನಿರ್ವಹಣೆ ಕೆಲಸದ ಸಮಯದಲ್ಲಿ ಇದು ಗೊಂದಲಕ್ಕೆ ಕಾರಣವಾಯಿತು. ಹಿಂದಿನ ರೆಡ್ ಅಲರ್ಟ್ಗಳನ್ನು ನಿರ್ಲಕ್ಷಿಸದಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಅದು ಹೇಳಿದೆ.
ದುರಂತಕ್ಕೆ ಸಿಗ್ನಲಿಂಗ್ ವಿಭಾಗವು ಪ್ರಾಥಮಿಕವಾಗಿ ಜವಾಬ್ದಾರರೆಂದು ಕಂಡುಬಂದರೂ, ಕಾರ್ಯಾಚರಣೆ ವಿಭಾಗದ ಭಾಗವಾಗಿರುವ ಸ್ಟೇಷನ್ ಮಾಸ್ಟರ್, ದುರಂತವನ್ನು ತಡೆಯಬಹುದಾದ ಸಿಗ್ನಲಿಂಗ್ ನಿಯಂತ್ರಣ ವ್ಯವಸ್ಥೆಯ ಅಸಹಜ ನಡವಳಿಕೆ ಪತ್ತೆಹಚ್ಚಲು ವಿಫಲವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ, ಜೂನ್ 2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಅದರ ಗೊತ್ತುಪಡಿಸಿದ ಮುಖ್ಯ ಮಾರ್ಗದ ಬದಲಿಗೆ ಬಹನಾಗಾ ಬಜಾರ್ ನಿಲ್ದಾಣದ 'ಲೂಪ್ ಲೈನ್' ಅನ್ನು ಪ್ರವೇಶಿಸಿತು ಮತ್ತು ನಿಂತಿದ್ದ ಸರಕುಗಳ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಹಳಿತಪ್ಪಿದ ರೈಲು ಮತ್ತು ಅದರ ಭಾಗಗಳು ಅಲ್ಲಿದ್ದ ಮತ್ತೊಂದು ರೈಲು ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ಗೆ ಡಿಕ್ಕಿ ಹೊಡೆದವು.
ಇದನ್ನೂ ಓದಿ : Threads ಆ್ಯಪ್: ಏಳು ಗಂಟೆಗಳಲ್ಲಿ 10 ಮಿಲಿಯನ್ ಸೈನ್ ಅಪ್