ಇಟಾವಾ( ಉತ್ತರಪ್ರದೇಶ): ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ಕರುಳಿನ ಅಸಹಜ ಹಿಗ್ಗುವಿಕೆ ಖಾಯಿಲೆಯಿಂದ ಬಳಲುತ್ತಿದ್ದ ಏಷ್ಯಾಟಿಕ್ ಸಿಂಹ ‘ಬಾಹುಬಲಿ’ ಇಟಾವಾ ಸಫಾರಿ ಪಾರ್ಕ್‌ನಲ್ಲಿ ಸಾವನ್ನಪ್ಪಿದೆ. ಈ ಸಿಂಹಕ್ಕೆ ಐದು ವರ್ಷ 11 ತಿಂಗಳ ವಯಸ್ಸಾಗಿತ್ತು. ಇದಕ್ಕೂ ಮುನ್ನ ಏಷಿಯಾಟಿಕ್ ಸಿಂಹ 'ಕೇಸರಿ' ಎಂದು ಕರೆಯಿಸಿಕೊಳ್ಳುತ್ತಿದ್ದ ಮೂರು ವರ್ಷದ ಗಂಡು ಸಿಂಹ ಡಿಸೆಂಬರ್ 3 ರಂದು ಸಾವನ್ನಪ್ಪಿತ್ತು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಫಾರಿ ನಿರ್ದೇಶಕ ಅನಿಲ್ ಪಟೇಲ್, “ಕಳೆದ ಕೆಲವು ತಿಂಗಳುಗಳಿಂದ ಬಾಹುಬಲಿ ಮೆಗಾಕಾಲನ್‌ನಿಂದ ಬಳಲುತ್ತಿತ್ತು, ಇದರಿಂದಾಗಿ ಆ ಸಿಂಹ ಮಲವಿಸರ್ಜನೆ ಸಮಸ್ಯೆಯನ್ನು ಎದುರಿಸುತ್ತಿತ್ತು. ಔಷಧಗಳು ಮತ್ತು ಎನಿಮಾಗಳ ಹೊರತಾಗಿಯೂ, ಬಾಹುಬಲಿ ತೀವ್ರವಾದ ಮಲಬದ್ಧತೆಯಿಂದ ಬಳಲುತ್ತಿತ್ತು. ಜನವರಿ 2018 ರಲ್ಲಿ ಇಟಾವಾ ಸಫಾರಿಯಲ್ಲಿ ಸಿಂಹಿಣಿ 'ಜೆಸ್ಸಿಕಾ' ಗೆ ಈ ಬಾಹುಬಲಿ ಜನಿಸಿದ್ದ. ಉತ್ತಮ ಆರೋಗ್ಯ ಮತ್ತು ಗಾತ್ರದ ಕಾರಣದಿಂದಾಗಿ ಈ ಸಿಂಹಕ್ಕೆ ಬಾಹುಬಲಿ ಎಂಬ ಹೆಸರನ್ನು ಇಡಲಾಗಿತ್ತು.
ಸಫಾರಿ ಪಾರ್ಕ್‌ನಲ್ಲಿ ಪರಿಣಿತ ಪಶುವೈದ್ಯರ ತಂಡವು ಬಾಹುಬಲಿಗೆ ನಿರಂತರ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಿತ್ತು. ಅಲ್ಲದೇ, ಮಥುರಾ ಪಶುವೈದ್ಯಕೀಯ ಮತ್ತು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಸೇರಿದಂತೆ ಇತರ ಸಂಸ್ಥೆಗಳ ತಜ್ಞರು ಸಿಂಹದ ಆರೋಗ್ಯದ ಬಗ್ಗೆ ನಿರಂತರವಾಗಿ ಸಲಹೆ - ಸೂಚನೆಗಳನ್ನು ನೀಡಿದ್ದರು. ಆದರೂ ಬಾಹುಬಲಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಷಿಯಾಟಿಕ್ ಸಿಂಹ ಬಾಹುಬಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮತ್ತು ಇತರ ಪರೀಕ್ಷೆಗಳಿಗಾಗಿ ಐವಿಆರ್ಐ ಬರೇಲಿಗೆ ಕಳುಹಿಸಲಾಗಿದೆ ಎಂದು ಸಫಾರಿ ನಿರ್ದೇಶಕ ಅನಿಲ್ ಪಟೇಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತರ ವನ್ಯಜೀವಿ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆಯ ಆಧಾರದ ಮೇಲೆ ಸಫಾರಿ ವೈದ್ಯರು ಬಾಹುಬಲಿಯ ಆರೈಕೆ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಬಾಹುಬಲಿಯ ಆರೋಗ್ಯ ನಿರಂತರವಾಗಿ ಹದಗೆಟ್ಟಿತ್ತು. ಕೊನೆಯದಾಗಿ ಸೋಮವಾರ ಬಾಹುಬಲಿ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದ. ಕೊನೆಗೆ ಮಂಗಳವಾರ ಕೊನೆಯುಸಿರೆಳೆದಿದೆ '' ಎಂದು ಪಟೇಲ್ ತಿಳಿಸಿದ್ದಾರೆ. 2014ರಿಂದ ಇಲ್ಲಿಯವರೆಗೆ ಸಫಾರಿಯಲ್ಲಿ ಏಳು ಮರಿಗಳು ಸೇರಿದಂತೆ ಒಂಬತ್ತು ಸಿಂಹಗಳು ಸಾವನ್ನಪ್ಪಿವೆ.
ಏಷಿಯಾಟಿಕ್ ಸಿಂಹ 'ಕೇಸರಿ', ಏಪ್ರಿಲ್‌ನಿಂದ ಪಾರ್ಶ್ವವಾಯುದಿಂದ ಬಳಲುತ್ತಿದ್ದು, ಡಿಸೆಂಬರ್ 3 ರಂದು ಮೃತಪಟ್ಟಿತ್ತು. ಮೂರು ವರ್ಷದ ಗಂಡು ಎಟವಾ ಸಫಾರಿಯಲ್ಲಿಯೇ 'ಜೆನ್ನಿಫರ್' ಮತ್ತು 'ಮನನ್' ಎಂಬ ಜೋಡಿಗೆ ಕೇಸರಿ ಏಪ್ರಿಲ್ 15, 2020 ರಂದು ಜನಿಸಿತ್ತು. ಕೇಸರಿ, ತಾಯಿ 'ಜೆನ್ನಿಫರ್' ನವೆಂಬರ್ 10 ರಂದು ನಿಧನರಾದರೆ,'ಮನನ್' ಚರ್ಮದ ಕ್ಯಾನ್ಸರ್ನಿಂದ ಜೂನ್ 13, 2022 ರಂದು ನಿಧನವಾಗಿತ್ತು.
ಇದನ್ನು ಓದಿ:'ಮದುವೆಯನ್ನೇ ನುಂಗಿದ ಮಟನ್ ಊಟ': ತೆಲಂಗಾಣದಲ್ಲಿ ಮಾಂಸದೂಟ ನೀಡದ್ದಕ್ಕೆ ವಿವಾಹವೇ ರದ್ದು!