ಶ್ರೀನಗರ: ಸ್ವಾರಸ್ಯಕರ ಬೆಳವಣಿಗೆಯೊಂದರಲ್ಲಿ ದುಃಖಿತ ತಾಯಿಗೆ ಸಂಬಂಧಿಸಿದ ವಿವಾದವೊಂದನ್ನು ಇತ್ಯರ್ಥಗೊಳಿಸಲು ಜಮ್ಮು ಕಾಶ್ಮೀರದ ಅಧಿಕಾರಿಗಳು ಮುಂದಾಗಿದ್ದಾರೆ. ದುಃಖಿತ ತಾಯಿಗೆ ಸಹಾಯ ಮಾಡುವ ಉದ್ದೇಶದಿಂದ ಹೆಣ್ಣುಮಗುವಿನ ಮೃತ ದೇಹವನ್ನು ಹೊರ ತೆಗೆದು ಅದರ ನಿಜವಾದ ತಂದೆ - ತಾಯಿ ಯಾರು ಎಂಬುದನ್ನು ಪತ್ತೆ ಹಚ್ಚಲು ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಏನಿದು ಘಟನೆ?: ನವೆಂಬರ್ 3 ರಂದು, ಬುದ್ಗಾಮ್‌ನ ಪಾಟ್ಲಿಬಾಗ್ ಪ್ರದೇಶದ ಕುಟುಂಬವೊಂದು ತಮ್ಮ ಸೊಸೆಗೆ ಗಂಡು ಮಗು ಜನಿಸಿದೆ ಎಂದು ಸಂತಸಗೊಂಡಿದ್ದರು. ಮತ್ತು ಈ ನಡುವೆ ಮಗುವನ್ನು ಆರೋಗ್ಯದ ಕಾರಣಗಳಿಗಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು.
ಆದರೆ 13 ದಿನಗಳ ನಂತರ ಆಸ್ಪತ್ರೆಯ ಸಿಬ್ಬಂದಿ ಮಗು ಇನ್ನಿಲ್ಲ ಎಂದು ತಿಳಿಸಿ ಕುಟುಂಬಕ್ಕೆ ಒಪ್ಪಿಸಿದ್ದರಂತೆ. ಇನ್ನೇನು ಅವರು ಆ ಮಗುವನ್ನು ಸಮಾಧಿ ಮಾಡಲು ಮನೆಗೆ ತೆಗೆದುಕೊಂಡು ಹೋಗಿ ಶವಸಂಸ್ಕಾರಕ್ಕೆ ಅಣಿಯಾಗುತ್ತಿದ್ದಂತೆ ಅವರಿಗೆ ಇದು ಹೆಣ್ಣು ಮಗು ಎಂಬುದು ಗೊತ್ತಾಗಿದೆ. ಅಷ್ಟಕ್ಕೂ ನವಜಾತ ಶಿಶುವಿನ ಅಂತ್ಯ ಸಂಸ್ಕಾರವನ್ನೂ ಮಾಡಲಾಗಿದೆ. ನಂತರ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಗಂಡು ಮಗುವಿನ ಬದಲಿಗೆ ಹೆಣ್ಣು ಮಗುವನ್ನು ಹಿಂದಿರುಗಿಸಿದ್ದು ಏಕೆ ಎಂದು ಪ್ರಶ್ನಿಸಿದೆ.
ಕುತೂಹಲಕಾರಿ ವಿಷಯ ಎಂದರೆ ಕುಟುಂಬವು ತಮಗೆ ಗಂಡು ಮಗುವಿದೆ ಎಂದು SKIMS ಬೆಮಿನಾ ನೀಡಿದ ಲಿಖಿತ ದಾಖಲೆಗಳನ್ನು ಆಧರಿಸಿ ಹೇಳಿಕೊಂಡಿದೆ. ಇದುವೇ ಈಗ ವಿವಾದಕ್ಕೆ ಕಾರಣವಾಗಿದೆ. ಈಗ ಅಧಿಕಾರಿಗಳು ಸತ್ತ ಹೆಣ್ಣು ಮಗುವಿನ ಮೂಲವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ಮಗು ಪಾಟ್ಲಿಬಾಗ್ ಕುಟುಂಬಕ್ಕೆ ಸೇರಿದ್ದಲ್ಲ ಎಂದು ದೃಢಪಟ್ಟರೆ, ಕಾಣೆಯಾದ ಗಂಡು ಮಗುವನ್ನು ಪತ್ತೆ ಮಾಡುವುದು ಸುಲಭವಾಗಲಿದೆ ಎಂಬುದು ಆಸ್ಪತ್ರೆಯವರ ಪ್ರಯತ್ನವಾಗಿದೆ.
ಈ ಬಗ್ಗೆ ಆಸ್ಪತ್ರೆ ಹೇಳುವುದು ಏನು?: SKIMS ಬೆಮಿನಾ ವೈದ್ಯಕೀಯ ಅಧೀಕ್ಷಕ ಡಾ. ಶಿಫಾ ದೇವಾ ಈ ಪ್ರಕರಣದ ಬಗ್ಗೆ ಮಾತನಾಡಿ, ರುಖ್ಸಾನಾ ಎಂದು ಗುರುತಿಸಲಾದ ಮಹಿಳೆ ನವೆಂಬರ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಹೃದಯದ ಎಡಭಾಗದ ವೈಫಲ್ಯಕ್ಕೆ ಸಂಬಂಧಿಸಿದಂತೆ ಹಿರಿಯ ಶಸ್ತ್ರಚಿಕಿತ್ಸಕರಿಂದ ಚಿಕಿತ್ಸೆ ನೀಡಲಾಯಿತು. ನಂತರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿಗೆ ಉಸಿರುಕಟ್ಟುವಿಕೆ ಸಮಸ್ಯೆ ಇದ್ದುದರಿಂದ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಕುಟುಂಬವು ಎಂಆರ್‌ಡಿಯಲ್ಲಿ ತಮಗೆ ಗಂಡು ಮಗುವಾಗಿದೆ ಎಂದು ನೋಂದಾಯಿಸಿದ್ದಾರೆ. ಆದರೆ ಆಸ್ಪತ್ರೆ ಈ ಬಗ್ಗೆ ಪ್ರಮಾಣಪತ್ರ ನೀಡಿಲ್ಲ ಎಂದು ಅಧೀಕ್ಷರು ತಿಳಿಸಿದ್ದಾರೆ. ಈಗ ಸತ್ತ ಮಗುವಿನ ತಂದೆ - ತಾಯಿ ಯಾರು ಎಂಬುದು ಗೊತ್ತಾಗಬೇಕಿದೆ. ಆ ಬಳಿಕವೇ ಗಂಡು ಮಗು ಯಾರದ್ದು ಎಂಬುದನ್ನು ಪತ್ತೆ ಮಾಡಲು ಸಾಧ್ಯ ಎಂಬುದು ಅಧೀಕ್ಷರ ಮಾತಾಗಿದೆ.
ಇದನ್ನು ಓದಿ: ಪತ್ನಿ ಕೊಲೆ.. ಹಳ್ಳದಲ್ಲಿ ಹಳ್ಳ ತೋಡಿ ಗರ್ಭಿಣಿಯ ಕಥೆ ಮುಗಿಸಿದ ಗಂಡ