ಡೆಹ್ರಾಡೂನ್(ಉತ್ತರಾಖಂಡ): 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ದೇಶದ ವಿವಿಧಡೆ ಬೆಳಗ್ಗೆಯಿಂದಲೇ ಯೋಗಾಭ್ಯಾಸ ನಡೆಯುತ್ತಿದೆ. ಜಗತ್ತಿಗೆ ಯೋಗವನ್ನು ಹೊಸ ರೂಪದಲ್ಲಿ ಪರಿಚಯಿಸಿದ ಕೀರ್ತಿ ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ಸಲ್ಲುತ್ತದೆ. ಯೋಗದಲ್ಲಿ ಬಾಬಾ ರಾಮ್‌ದೇವ್ ಅವರ ಸಾಧನೆಗಳನ್ನು ನೋಡಿ ಅವರನ್ನು ಯೋಗ ಗುರು ಎಂದೇ ಕರೆಯಲಾಗುತ್ತಿದೆ.
ಯೋಗದಿಂದಲೇ ಇಂದು ಅವರು ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಸೈಕಲ್ ತುಳಿಯುತ್ತಿದ್ದ ಯೋಗ ಗುರು ಸ್ವಾಮಿ ರಾಮ್‌ದೇವ್ ಕೊನೆಗೂ ಇಷ್ಟು ದೊಡ್ಡ ಸಾಮ್ರಾಜ್ಯದ ಯಜಮಾನನಾದದ್ದು ಹೇಗೆ ಎಂಬುದರ ಬಗ್ಗೆ ತಿಳಿಯಲು ಅತಿ ಹೆಚ್ಚಿನ ಮಂದಿ ಉತ್ಸುಕರಾಗಿರುತ್ತಾರೆ.
ಆರಂಭದ ದಿನಗಳು: ಇಂದು ಹರಿದ್ವಾರದಲ್ಲಿ ಮಾತ್ರವಲ್ಲ ಬಾಬಾ ರಾಮ್‌ದೇವ್ ಅವರ ಪತಂಜಲಿ (ರಾಮ್‌ದೇವ್ ಕಂಪನಿ ಪತಂಜಲಿ) ದೇಶದ ಎಲ್ಲ ಸ್ಥಳಗಳಲ್ಲಿ ತನ್ನ ಛಾಪು ಹರಿಸಿದೆ. ಅವರನ್ನು ಹತ್ತಿರದಿಂದ ನೋಡಿದ ಜನರು ಈಗಲೂ ಹೇಳುವುದೇನೆಂದರೆ, ಕೆಲ ವರ್ಷಗಳ ಹಿಂದೆ ಬಾಬಾ ರಾಮ್‌ದೇವ್ ಮತ್ತು ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರು ಹರಿದ್ವಾರದ ಕಂಖಾಲ್‌ನಲ್ಲಿರುವ ಆಶ್ರಮದಲ್ಲಿ ಯೋಗ ಕಲಿಸುತ್ತಿದ್ದರು. ಜೊತೆಗೆ ಇಬ್ಬರೂ ಆಯುರ್ವೇದ ಔಷಧಗಳನ್ನು ಸೈಕಲ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಸೈಕಲ್‌ನಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಬಾಬಾ ರಾಮ್‌ದೇವ್ ಅವರೀಗ ಪತಂಜಲಿ ಎನ್ನುವ ಬೃಹತ್ ವ್ಯವಹಾರ ಸಂಸ್ಥೆಯ ಒಡೆಯನಾಗಿದ್ದಾರೆ.
ಕಂಖಾಲ್‌ನ ಆಶ್ರಮ: ಸ್ವಾಮಿ ರಾಮದೇವ್ ಅವರು ಹರಿದ್ವಾರದ ಕಂಖಾಲ್‌ನ ಎರಡು ಕೋಣೆಗಳ ಆಶ್ರಮದಿಂದ ತನ್ನ ಯಶಸ್ವಿ ಜೀವನಕ್ಕೆ ಪದಾರ್ಪಣೆ ಮಾಡಿದರು. ಸುಮಾರು 22 ವರ್ಷಗಳ ಹಿಂದೆ ರಾಮ್‌ದೇವ್ ಹೆಸರು ಹರಿದ್ವಾರ ಮತ್ತು ಹರಿದ್ವಾರದ ಕಂಖಾಲ್‌ಗೆ ಮಾತ್ರ ಸೀಮಿತವಾಗಿತ್ತು. ಆದರಿಂದು ಪರಿಸ್ಥಿತಿ ಬೇರೆಯಾಗಿದೆ. ಪತಂಜಲಿ ಯೋಗಪೀಠದ ಸಿಇಒ ಆಚಾರ್ಯ ಬಾಲಕೃಷ್ಣ ಅವರ ಹೆಸರು ದೇಶದ 10 ಶ್ರೀಮಂತ ವ್ಯಕ್ತಿಗಳಲ್ಲಿ ಬರುತ್ತದೆ. ಈ ಅಂಶದಿಂದ ಯೋಗ ಗುರುಗಳಾದ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವ್ಯಾಪ್ತಿಯನ್ನು ನೀವೇ ಅಳೆಯಬಹುದು.
ಆಚಾರ್ಯ ಬಾಲಕೃಷ್ಣರ ಪಾತ್ರ: ಯೋಗ ಗುರು ರಾಮದೇವ್ ಅವರ ಸಂಸ್ಥೆಯಲ್ಲಿ ಎಲ್ಲಿಯೂ ನೇರವಾಗಿ ಅವರ ಹೆಸರಿಲ್ಲ. ಆಚಾರ್ಯ ಬಾಲಕೃಷ್ಣ ಅವರು ಸಹಿ ಮಾಡುವ ಅಧಿಕಾರ ಮಾತ್ರವಲ್ಲ, ಬಾಬಾ ರಾಮದೇವ್ ಅವರ ಪ್ರಯಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಬಾಬಾ ರಾಮದೇವ್ ಅವರು ತಮ್ಮ ಸಾಮ್ರಾಜ್ಯವನ್ನು ಸಣ್ಣ ಯೋಗ ಶಿಬಿರಗಳೊಂದಿಗೆ ಪ್ರಾರಂಭಿಸಿದರು.
ಆರಂಭದ ದಿನಗಳಲ್ಲಿ ರಾಮ್ ದೇವ್ ಅವರ ಶಿಬಿರಕ್ಕೆ ಬಂದವರಿಗೆಲ್ಲ ಉಚಿತವಾಗಿ ಯೋಗ ಹೇಳಿಕೊಡುತ್ತಿದ್ದರು. ಇದೀಗ ತಮ್ಮ ಯೋಗದಿಂದಲೇ ಇಡೀ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ ಯೋಗ ಗುರು ಬಾಬಾ ರಾಮದೇವ್.
ಸಾಧನೆಯತ್ತ..: ಇಂದು ಯೋಗ ಗುರು ರಾಮದೇವ್ ಹೋದ ನಗರದಲ್ಲೆಲ್ಲ ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಹರಿದ್ವಾರದಲ್ಲಿರುವ ಅವರ ಆಶ್ರಮದಲ್ಲಿ ಯೋಗ ಶಿಬಿರಕ್ಕೆ ಸೇರುವ ಜನರು ಭಾರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಯೋಗದಿಂದ ಆರಂಭವಾದ ಸ್ವಾಮಿ ರಾಮ್‌ದೇವ್ ಅವರ ಆಸ್ತಿ ಇಂದು ಸುಮಾರು 1,400 ಕೋಟಿ ರೂ.ಗೆ ಬೆಳೆದು ನಿಂತಿದೆ ಎನ್ನಲಾಗುತ್ತದೆ.
ಸ್ವಾಮಿ ರಾಮ್‌ದೇವ್ ಅವರ ಈ ಆದಾಯವನ್ನು ಯೋಗ, ಎಂಎಸ್ಸಿಜಿ ವ್ಯಾಪಾರ ಮತ್ತು ಪತಂಜಲಿ ಯೋಗಪೀಠದ ವಿವಿಧ ಕೆಲಸಗಳಿಂದ ಗಳಿಸಲಾಗಿದೆ ಎಂದು ಹೇಳಲಾಗುತ್ತದೆ. ಇನ್ನು ಅವರ ವಹಿವಾಟು ಸುಮಾರು 25 ಸಾವಿರ ಕೋಟಿ ಎಂದು ಬಾಬಾ ರಾಮ್‌ದೇವ್ ಅವರೇ ಈ ಹಿಂದೆ ಹೇಳಿದ್ದರು.
ಆದಾಯ: ಅಂದಾಜಿನ ಪ್ರಕಾರ, ಪತಂಜಲಿ ಆಯುರ್ವೇದಿಕ್ ಸಂಸ್ಥೆ 2019 ಮತ್ತು 2020ರಲ್ಲಿ 425 ಕೋಟಿ ರೂ. ಲಾಭ ಗಳಿಸಿತ್ತು. ನಂತರ ಅವರು ದೇಶದ ಪ್ರಸಿದ್ಧ ರುಚಿ ಸೋಯಾ ಕಂಪನಿಯನ್ನು ಖರೀದಿಸಲು ನಿರ್ಧರಿಸಿದರು. ಈ ನಷ್ಟದ ಕಂಪನಿಯನ್ನು ಖರೀದಿಸಿದಾಗ ನಷ್ಟ ಅನುಭವಿಸಿದ್ದರು. ಆದ್ರೀಗ ರುಚಿ ಸೋಯಾ ಕಂಪನಿಯ ಗಳಿಕೆ ಸುಮಾರು 4,475 ಕೋಟಿ ಮೀರಿದೆ.
ಇನ್ನೂ ಮಾಧ್ಯಮದ ವರದಿಗಳ ಪ್ರಕಾರ, ಪ್ರಸ್ತುತ ಯೋಗ ಗುರು ಸ್ವಾಮಿ ರಾಮ್‌ದೇವ್ ಅವರ ಒಟ್ಟು ಆಸ್ತಿ (ಪತಂಜಲಿ ಯೋಗಪೀಠ ಟ್ರಸ್ಟ್ ಮತ್ತು ದಿವ್ಯ ಫಾರ್ಮಸಿ) 43,000 ಕೋಟಿ ರೂಪಾಯಿಗಿಂತ ಹೆಚ್ಚಿದೆ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಬಾಬಾ ರಾಮ್‌ದೇವ್ ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರ ಆಸ್ತಿ 70,000 ಕೋಟಿ ರೂಪಾಯಿ ಎಂದು ಚೀನಾದ ನಿಯತಕಾಲಿಕೆ ತೋರಿಸಿತ್ತು. ಆದರೆ ನಿಖರ ಮಾಹಿತಿ ಇಲ್ಲ.
ಬಾಬಾ ಅಷ್ಟೇ ಅಲ್ಲ ಆಚಾರ್ಯ ಬಾಲಕೃಷ್ಣ ಕೂಡಾ ಶ್ರೀಮಂತ: ಬಾಬಾ ರಾಮ್‌ದೇವ್ ಮಾತ್ರವಲ್ಲ ಆಚಾರ್ಯ ಬಾಲಕೃಷ್ಣ ಕೂಡ ಯೋಗ ಮತ್ತು ಆಯುರ್ವೇದದಿಂದ ಶ್ರೀಮಂತರಾಗಿದ್ದಾರೆ. ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿರುವ ದಿವ್ಯ ಯೋಗ ಫಾರ್ಮಸಿಯು ಸಿರಿಧಾನ್ಯಗಳಿಂದ ಹಿಡಿದು ಗೃಹೋಪಯೋಗಿ ಉತ್ಪನ್ನಗಳವರೆಗೆ ಎಲ್ಲ ಉತ್ಪನ್ನಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ. ಬಟ್ಟೆಯಿಂದ ಹಿಡಿದು ರುಚಿ ಸೋಯಾವರೆಗೆ ಬಾಬಾ ರಾಮದೇವ್ ಹಣ ಹೂಡಿಕೆ ಮಾಡಿದ್ದಾರೆ.
ಪ್ರಸ್ತುತ ರಾಮ್‌ದೇವ್ ಅವರು ಹರಿದ್ವಾರದ ಕಂಖಾಲ್‌ನಲ್ಲಿರುವ ದಿವ್ಯ ಫಾರ್ಮಸಿಯಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಹರಿದ್ವಾರದ ಹಳೆಯ ಉದ್ಯಮ ಪ್ರದೇಶದಲ್ಲಿ ಎರಡು ದೊಡ್ಡ ಕೈಗಾರಿಕೆಗಳಿವೆ. ಇದರಲ್ಲಿ ನೂರಾರು ಜನರು ಕೆಲಸ ಮಾಡುತ್ತಿದ್ದಾರೆ. ಹರಿದ್ವಾರ ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯವಾದ ಪತಂಜಲಿ ಯೋಗಪೀಠವಿದೆ.
ಮುಂಬೈ, ದೆಹಲಿ, ಕೋಲ್ಕತ್ತಾ, ಹರಿಯಾಣ, ಪಂಜಾಬ್ ಮುಂತಾದ ಸ್ಥಳಗಳಲ್ಲಿ ದೊಡ್ಡ ಕಂಪನಿಗಳು ಬಾಬಾ ರಾಮ್‌ದೇವ್‌ಗೆ ಸೇರಿವೆ. ಬಾಬಾ ರಾಮದೇವ್ ಅವರ ಉತ್ಪನ್ನಗಳ ಕೇಂದ್ರಗಳು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಇವೆ. ಹರಿದ್ವಾರದಲ್ಲಿಯೇ ಪತಂಜಲಿ ಗೋಶಾಲ ಇದೆ. ಹರಿದ್ವಾರ ಲಕ್ಸರ್ ರಸ್ತೆಯಲ್ಲಿ ಭವ್ಯವಾದ ಪತಂಜಲಿ ಫುಡ್ ಪಾರ್ಕ್ ಇದೆ. ಇದನ್ನು ದೇಶದ ಅತಿದೊಡ್ಡ ಫುಡ್ ಪಾರ್ಕ್ ಎಂದೂ ಕೂಡ ಕರೆಯುತ್ತಾರೆ. ಆರೋಗ್ಯಂ ಬಹುಮಹಡಿ ಮೆಗಾ ವಸತಿ ಯೋಜನೆಯೂ ಇಲ್ಲಿದೆ. ಹೀಗೆ ಇವರ ವ್ಯವಹಾರ ದೊಟ್ಟ ಮಟ್ಟದಲ್ಲಿದೆ.
ಇದನ್ನೂ ಓದಿ: ಮೈಸೂರಲ್ಲಿ ಓಂಕಾರದೊಂದಿಗೆ ಮೋದಿ ಯೋಗಾಸನ : ವಿಡಿಯೋ
ಒಟ್ಟಿನಲ್ಲಿ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಯೋಗದ ಮೂಲಕ ದೇಶದಲ್ಲಿ ಅತಿ ದೊಡ್ಡ ಸ್ಥಾನವನ್ನು ಪಡೆದಿದ್ದಾರೆ. ಅವರ ಜೀವನ ಶೈಲಿ, ಕಠಿಣ ಪರಿಶ್ರಮ ಮತ್ತು ಯೋಗದ ಮೇಲಿನ ಉತ್ಸಾಹ ಬಾಬಾ ರಾಮ್‌ದೇವ್ ಅವರನ್ನು ಇಂದು ಯೋಗ ಗುರುವನ್ನಾಗಿ ಮಾಡಿದೆ. ಆಚಾರ್ಯ ಬಾಲಕೃಷ್ಣ ಕೂಡ ಇಂದು ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಇವರಿಬ್ಬರೀಗ ವಿಶ್ವದಲ್ಲಿ ಯೋಗದ ಪ್ರಚಾರದಲ್ಲಿ ತೊಡಗಿದ್ದಾರೆ.