ಮುಂಬೈ: ದಾನ ಮಾಡುವುದರಲ್ಲಿ ದೇಶದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಪ್ರಮುಖ ಸಾಫ್ಟವೇರ್ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ 2020-21ರಲ್ಲಿ ಒಟ್ಟು 9,713 ಕೋಟಿ ರೂ. ದೇಣಿಗೆ(ದಾನ) ರೂಪದಲ್ಲಿ ನೀಡಿದ್ದಾರೆ. ಅಂದರೆ ಪ್ರತಿ ದಿನ ಇವರು 27 ಕೋಟಿ ರೂ. ದಾನ ರೂಪದಲ್ಲಿ ನೀಡಿದ್ದಾರೆ.
ಎಡೆಲ್ಗಿವ್ ಹುರುನ್ ಇಂಡಿಯಾ ಫಿಲಾಂಥ್ರಪಿ ಪಟ್ಟಿ 2021ರ ಪ್ರಕಾರ, HCLನ ಶಿವ ನಾಡಾರ್ ದಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮೂರನೇ ಸ್ಥಾನದಲ್ಲಿದ್ದಾರೆ.
ಸಾಂಕ್ರಾಮಿಕ ರೋಗ ಕೋವಿಡ್ ಸಂದರ್ಭದಲ್ಲಿ ಅಜೀಂ ಪ್ರೇಮ್ಜಿ ತಮ್ಮ ದಾನದ ಪ್ರಮಾಣ ನಾಲ್ಕನೇ ಒಂದರಷ್ಟು ಹೆಚ್ಚಳ ಮಾಡಿಕೊಂಡಿದ್ದು, HCLನ ಶಿವ ನಾಡಾರ್ 1,263 ಕೋಟಿ ರೂ. ದಾನ ರೂಪದಲ್ಲಿ ನೀಡಿದ್ದಾರೆ.
ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ 577 ಕೋಟಿ ರೂ. ದೇಣಿಗೆ ರೂಪದಲ್ಲಿ ನಿಡಿದ್ದು, ನಂತರದ ಸ್ಥಾನದಲ್ಲಿ ಕುಮಾರ್ ಮಂಗಳಂ ಬಿರ್ಲಾ 377 ಕೋಟಿ ರೂ. ನೀಡಿ 4ನೇ ಸ್ಥಾನದಲ್ಲಿದ್ದಾರೆ.
ದೇಶದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರು, ವಿಪತ್ತು ಪರಿಹಾರಕ್ಕಾಗಿ 130 ಕೋಟಿ ರೂ. ದೇಣಿಗೆ ನೀಡಿದ್ದು, 8ನೇ ಸ್ಥಾನದಲ್ಲಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು 183 ಕೋಟಿ ರೂ. ನೀಡಿ 5ನೇ ಸ್ಥಾನದಲ್ಲಿದ್ದಾರೆ.ಅಗ್ರ 10 ಸ್ಥಾನಗಳಲ್ಲಿ ಹಿಂದೂಜಾ ಕುಟುಂಬ, ಬಜಾಜ್, ಅನಿಲ್ ಅಗರ್ವಾಲ್ ಹಾಗೂ ಬರ್ಮನ್ ಕುಟುಂಬಗಳು ಸೇರಿವೆ.