ಅಯೋಧ್ಯೆ(ಉತ್ತರ ಪ್ರದೇಶ): ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆ ರಾಮಮಯವಾಗಿದೆ. ಇಲ್ಲಿನ ರೈಲ್ವೆ ಜಂಕ್ಷನ್ ಅನ್ನು ಅಯೋಧ್ಯಾ ಧಾಮ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಹೊಸ ವಿಮಾನ ನಿಲ್ದಾಣಕ್ಕೆ ಋಷಿ ಕವಿ ಮಹರ್ಷಿ ವಾಲ್ಮೀಕಿ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಡಿಸೆಂಬರ್ 30ರಂದು ಉದ್ಘಾಟನೆ: ಹೊಸ ವಿಮಾನ ನಿಲ್ದಾಣವನ್ನು 'ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್' ಎಂದು ಹೆಸರಿಸಲಾಗುತ್ತದೆ. ರಾಮಾಯಣ ಮಹಾಕಾವ್ಯವನ್ನು ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಡಿಸೆಂಬರ್ 30ರಂದು ಹೊಸದಾಗಿ ನಿರ್ಮಿಸಲಾದ ಈ ಅಯೋಧ್ಯೆ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
₹1,450 ಕೋಟಿ ವೆಚ್ಚದ ಏರ್ಪೋರ್ಟ್: ಅತ್ಯಾಧುನಿಕ ವಿಮಾನ ನಿಲ್ದಾಣದ 1ನೇ ಹಂತವನ್ನು 1,450 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಸುಸಜ್ಜಿತವಾಗಿದೆ. ಈ ಕಟ್ಟಡದ ಮುಂಭಾಗದಲ್ಲಿ ರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸಲಾಗಿದೆ. ಟರ್ಮಿನಲ್ ಕಟ್ಟಡದ ಒಳಭಾಗವನ್ನು ಭಗವಾನ್ ಶ್ರೀರಾಮನ ಜೀವನ ಬಿಂಬಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನ
ಟರ್ಮಿನಲ್ ಕಟ್ಟಡವು ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಎಲ್ಇಡಿ ಲೈಟಿಂಗ್, ಮಳೆನೀರು ಕೊಯ್ಲು, ಕಾರಂಜಿ, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಹಲವು ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಹೊಸ ವಿಮಾನ ನಿಲ್ದಾಣವು ಅಯೋಧ್ಯೆಗೆ ಸಂಪರ್ಕವನ್ನು ಸುಧಾರಿಸುತ್ತದೆ. ಇದು ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳ ಉತ್ತೇಜನಕ್ಕೆ ಕಾರಣವಾಗಲಿದೆ ಎಂದು ಪಿಎಂಒ ಹೇಳಿದೆ.
ಅದೇ ದಿನ, ಅಯೋಧ್ಯೆಯಲ್ಲಿ 2180 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಎರಡು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಲಿದ್ದಾರೆ.
ಬಿಗಿ ಭದ್ರತೆ: ಪ್ರಧಾನಿ ಪ್ರವಾಸ ಹಾಗೂ ಅಯೋಧ್ಯೆಯಲ್ಲಿ ಅವರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಮೂವರು ಡಿಐಜಿಗಳು, 17 ಎಸ್ಪಿಗಳು, 40 ಎಎಸ್ಪಿಗಳು, 82 ಡೆಪ್ಯುಟಿ ಎಸ್ಪಿಗಳು, 90 ಇನ್ಸ್ಪೆಕ್ಟರ್ಗಳು, 325 ಸಬ್ ಇನ್ಸ್ಪೆಕ್ಟರ್ಗಳು, 33 ಮಹಿಳಾ ಎಸ್ಐಗಳು, 2000 ಕಾನ್ಸ್ಟೆಬಲ್ಗಳು, 450 ಟ್ರಾಫಿಕ್ ಪೊಲೀಸ್ ಸಿಬ್ಬಂದಿ, 14 ಕಂಪನಿ ಪಿಎಸಿ ಮತ್ತು 6 ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಅಯೋಧ್ಯೆ ಭೇಟಿಗೆ ದಾಳಿ ಭೀತಿ: ಗುಪ್ತಚರ ಪಡೆಗಳಿಂದ ಹೈ ಅಲರ್ಟ್ ಘೋಷಣೆ