ನವದೆಹಲಿ: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭ ಮತ್ತು ಅದರ ಮುಂಚಿತವಾಗಿ ಜನದಟ್ಟಣೆ ತಪ್ಪಿಸಬೇಕು. ಜನನಿಬಿಡ ಸ್ಥಳಗಳು ಮತ್ತು ಯಾವುದೇ ಒಳಾಂಗಣ ಕೂಟಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಖಾತ್ರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಈ ಬಗ್ಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಜಿಲ್ಲಾವಾರು ಇನ್ಫ್ಲುಯೆಂಜ ತರಹದ ಅನಾರೋಗ್ಯ (ಇಲಿ - ILI ) ಮತ್ತು ತೀವ್ರತರ ಉಸಿರಾಟದ ಕಾಯಿಲೆ (ಸಾರಿ -SARI) ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು. ಇಂತಹ ಪ್ರಕರಣಗಳನ್ನು ನಿಯಮಿತವಾಗಿ ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ.
ಅಲ್ಲದೇ, ಇಂತಹ ಪ್ರಕರಣಗಳನ್ನು ಕೋವಿಡ್ ಪರೀಕ್ಷೆಗೂ ಒಳಪಡಿಸಬಹುದು. ಕೋವಿಡ್ ಪಾಸಿಟಿವ್ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡಿಸಬೇಕು. ಇದರಿಂದ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖವಾಗಿ, ಮುಂಬರುವ ಹಬ್ಬ-ಹರಿದಿನಗಳು ಮತ್ತು ಹೊಸ ವರ್ಷದ ಆಚರಣೆಗಳ ಮೇಲೆ ನಿಗಾ ವಹಿಸಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯದ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಸೋಂಕು ಹರಡುವಿಕೆ ಮತ್ತು ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಲು ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನ್ ಬಗ್ಗೆ ಗಮನಕೊಡಬೇಕೆಂದು ತಿಳಿಸಿದ್ದಾರೆ.
ಎಲ್ಲ ಜಿಲ್ಲೆಗಳಲ್ಲೂ ಆರ್‌ಟಿ-ಪಿಸಿಆರ್ ಪರೀಕ್ಷೆಗಳು, ಹಾಸಿಗೆಗಳ ಲಭ್ಯತೆ, ಆರೋಗ್ಯ ಕಾರ್ಯಕರ್ತರ ಲಭ್ಯತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಕರು, ವ್ಯಾಪಾರ ಮಾಲೀಕರು, ಮಾರುಕಟ್ಟೆ ಸಂಘಗಳು ಮುಂತಾದ ಪಾಲುದಾರರೊಂದಿಗೆ ಚರ್ಚಿಸಬೇಕು. ಜೊತೆಗೆ, ಮಾಸ್ಕ್ ಧರಿಸುವಿಕೆ, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಕೇಂದ್ರ ನಿರ್ದೇಶನ ನೀಡಿದೆ.