ನವದೆಹಲಿ : ಭಾರತದಲ್ಲಿ 2020ರೊಳಗೆ ಪ್ರತಿದಿನ ಸರಾಸರಿ 80 ಕೊಲೆಗಳು ವರದಿಯಾಗಿವೆ. ಒಂದು ವರ್ಷದಲ್ಲಿ ಒಟ್ಟು 29,193 ಸಾವು ಸಂಭವಿಸಿವೆ. ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶವು ಅಗ್ರಸ್ಥಾನದಲ್ಲಿದೆ ಎಂದು ಬುಧವಾರ ಬಿಡುಗಡೆ ಮಾಡಿದ ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶ ತಿಳಿಸಿದೆ.
ಶೇ1.ರಷ್ಟು ಕೊಲೆ ಪ್ರಕರಣ ಹೆಚ್ಚಳ : ಇದು 2019ರಲ್ಲಿ ಒಟ್ಟು 28,915 ಕೊಲೆಗಳಿಗಿಂತ ಶೇ.1ರಷ್ಟು ಹೆಚ್ಚಳವಾಗಿದೆ. ವರ್ಷದಲ್ಲಿ ದೈನಂದಿನ ಸರಾಸರಿ 79 ಕೊಲೆ ಸಂಭವಿಸಿವೆ ಎಂದು ಡೇಟಾ ತೋರಿಸಿದೆ. ಆದಾಗ್ಯೂ, ಅಪಹರಣ ಪ್ರಕರಣಗಳು 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ.19ಕ್ಕಿಂತಲೂ ಕಡಿಮೆಯಾಗಿವೆ.
ಓದಿ: ಕಳೆದ ವರ್ಷದ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳೆಷ್ಟು? ಕುತೂಹಲಕಾರಿ ಸಂಗತಿ ತಿಳಿಸುತ್ತೆ NCRB ವರದಿ
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ NCRBಯ ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ 1,05,036ರಷ್ಟಿದ್ದು, 2020ರಲ್ಲಿ ಒಟ್ಟು 84,805 ಅಪಹರಣ ಪ್ರಕರಣ ದಾಖಲಾಗಿವೆ.
ಕೊಲೆಯಲ್ಲಿ ಉತ್ತರಪ್ರದೇಶಕ್ಕೆ ಅಗ್ರಸ್ಥಾನ : ರಾಜ್ಯಗಳ ಅಂಕಿ-ಅಂಶ ನೋಡಿದರೆ 2020ರಲ್ಲಿ ಗರಿಷ್ಠ 3,779 ಕೊಲೆ ಪ್ರಕರಣ ಉತ್ತರಪ್ರದೇಶದಲ್ಲಿ ದಾಖಲಾಗಿವೆ. ನಂತರ ಬಿಹಾರ (3,150), ಮಹಾರಾಷ್ಟ್ರ (2,163), ಮಧ್ಯ ಪ್ರದೇಶ (2,101) ಮತ್ತು ಪಶ್ಚಿಮ ಬಂಗಾಳ (1,948) ದಾಖಲಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2020 ರಲ್ಲಿ 472 ಕೊಲೆ ಪ್ರಕರಣಗಳನ್ನು ದಾಖಲಾಗಿವೆ.
ಓದಿ: ದೇಶದ ನಗರ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ: NCRB
ಗರಿಷ್ಠ ಶೇ.38.5ರಷ್ಟು ಜನ 30-45 ವರ್ಷ ವಯೋಮಾನದವರಾಗಿದ್ದಾರೆ. 18-30 ವರ್ಷಗಳ ವರ್ಗದಲ್ಲಿ ಶೇ.35.9ರಷ್ಟು ಜನ ಕೊಲೆಯಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಶೇ.16.4 ಜನ 45-60 ವರ್ಷ ವಯೋಮಾನದವರು ಮತ್ತು ಶೇ.4ರಷ್ಟು ಜನ 60 ವರ್ಷಕ್ಕಿಂತ ಮೇಲ್ಪಟ್ಟವರು. ಉಳಿದಂತೆ ಅಪ್ರಾಪ್ತರು ಕೊಲೆಗೀಡಾಗಿದ್ದಾರೆ ಎಂದು ಎನ್‌ಸಿಆರ್‌ಬಿ ಹೇಳಿದೆ.
ಅಪಹರಣ ಪ್ರಕರಣಗಳು : ರಾಜ್ಯಗಳಲ್ಲಿ, 2020 ರಲ್ಲಿ ಗರಿಷ್ಠ 12,913 ಅಪಹರಣ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದು, ಪಶ್ಚಿಮ ಬಂಗಾಳ (9,309), ಮಹಾರಾಷ್ಟ್ರ (8,103), ಬಿಹಾರ (7,889) ಮತ್ತು ಮಧ್ಯಪ್ರದೇಶ (7,320) ದಾಖಲಾಗಿವೆ.
2020 ರಲ್ಲಿ ದೆಹಲಿಯು 4,062 ಅಪಹರಣ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವರ್ಷ ದೇಶದಲ್ಲಿ 84,805 ಪ್ರಕರಣಗಳಲ್ಲಿ 88,590 ಜನ ಅಪಹರಣಕ್ಕೆ ಒಳಗಾಗಿದ್ದಾರೆ ಎಂದು NCRB ಹೇಳಿದೆ. ಇವರಲ್ಲಿ, 56,591 ಮಕ್ಕಳು, ಉಳಿದವರು ವಯಸ್ಕರು ಎಂದು ಅದು ಹೇಳಿದೆ.
ಭಾರತೀಯ ದಂಡ ಸಂಹಿತೆ ಮತ್ತು ದೇಶದ ವಿಶೇಷ ಮತ್ತು ಸ್ಥಳೀಯ ಕಾನೂನುಗಳಿಂದ ವ್ಯಾಖ್ಯಾನಿಸಲಾದ ಅಪರಾಧ ಡೇಟಾವನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಕಾರ್ಯವನ್ನು NCRB ನಿರ್ವಹಿಸುತ್ತದೆ.