ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಲಡಾಖ್ನ ಮೌಂಟ್ ಕುನ್ನಲ್ಲಿ ಉಂಟಾದ ಹಿಮಪಾತದಿಂದಾಗಿ ಓರ್ವ ಯೋಧ ಮೃತಪಟ್ಟು, ಮೂವರು ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ಅಧಿಕಾರಿಗಳ ಮಾಹಿತಿ ಪ್ರಕಾರ, ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್ (HAWS) ಮತ್ತು ಆರ್ಮಿ ಅಡ್ವೆಂಚರ್ ವಿಂಗ್‌ನ ಸುಮಾರು 40 ಯೋಧರು ಲಡಾಖ್ನ ಮೌಂಟ್ ಕುನ್ನಲ್ಲಿ ಪರ್ವತಾರೋಹಣ ತರಬೇತಿಯಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಹಿಮಪಾತ ಉಂಟಾಗಿದ್ದು, ಓರ್ವ ಯೋಧ ಮೃತಪಟ್ಟು, ಮೂವರು ನಾಪತ್ತೆಯಾಗಿದ್ದಾರೆ. ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ನಾಪತ್ತೆಯಾದ ಯೋಧರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ.
ಟ್ರೈನ್ ದ ಟ್ರೈನರ್ ಪರಿಕಲ್ಪನೆಯ ಭಾಗವಾಗಿ ವಾರ್ ಫೇರ್ ಸ್ಕೂಲ್ನ ಸಿಬ್ಬಂದಿಗಳಿಗೆ ಇಲ್ಲಿನ ಹಿಮಪರ್ವತಗಳಲ್ಲಿ ಪರ್ವತಾರೋಹಣ ನೈಜ ತರಬೇತಿಯನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯೋಧರಿಗೂ ಟ್ರೈನಿಂಗ್ ನೀಡಲಾಗುತ್ತದೆ. ಈ ತರಬೇತಿ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 8ರಂದು ಮೌಂಟ್ ಕುನ್ನಲ್ಲಿ ಯೋಧರಿಗೆ ತರಬೇತಿ ನಡೆಯುವಾಗ ಹಿಮಪಾತ ಉಂಟಾಗಿತ್ತು. ಈ ವೇಳೆ ನಾಲ್ವರು ಹಿಮದಡಿಯಲ್ಲಿ ಸಿಲುಕಿದ್ದರು. ಇದರಲ್ಲಿ ಓರ್ವ ಯೋಧನ ಮೃತದೇಹ ಪತ್ತೆಯಾಗಿದೆ. ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಯೋಧರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿ ಮತ್ತು ಅತಿಯಾದ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆ ತಡವಾಗಿದೆ.
ಅನಂತ್ನಾಗ್ ಜಿಲ್ಲೆಯಲ್ಲಿ ಯೋಧ ನಾಪತ್ತೆ : ಕಳೆದ ಸೆಪ್ಟೆಂಬರ್ನಲ್ಲಿ ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಯೋಧರೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಓರ್ವ ಯೋಧ ನಾಪತ್ತೆಯಾಗಿದ್ದರು. ಅನಂತ್ನಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಿಂದ ಭಯೋತ್ಪಾದರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಡ್ರೋನ್ ಕ್ಯಾಮೆರಾಗಳ ಮೂಲಕ ಉಗ್ರರ ಅಡಗು ತಾಣವನ್ನು ಪತ್ತೆ ಹಚ್ಚಿ ಪ್ರತಿದಾಳಿ ನಡೆಸಿತ್ತು.
ಇದನ್ನೂ ಓದಿ : ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ