ಔರಂಗಾಬಾದ್ : ಪ್ರಿಯತಮನ ಜೊತೆ ಓಡಿ ಹೋಗಿದ್ದಕ್ಕೆ 17 ವರ್ಷದ ಬಾಲಕ ತನ್ನ 19 ವರ್ಷದ ಸಹೋದರಿಯ ತಲೆಯನ್ನೇ ಚಂಡಾಡಿದ್ದಾನೆ. ಈ ಘಟನೆ ಥೇಟ್ ಮರಾಠಿಯ ಖ್ಯಾತ ಸೈರಾಟ್ ಸಿನಿಮಾವನ್ನೇ ಹೋಲುವಂತಿದೆ.
ವೈಜಾಪುರ ತಹಸಿಲ್‌ನ ಲಾಡ್‌ಗಾಂವ್ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಈ ಕೊಲೆ ನಡೆದಿದೆ. ಆಕೆಯನ್ನು ಕೊಲೆ ಮಾಡಿದ ನಂತರ ಬಾಲಕ ಮತ್ತು ಆತನ ತಾಯಿ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಆರೋಪಿ ಬಾಲಕ ಮತ್ತು ಆತನ ತಾಯಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸ್ ಸೂಪರಿಂಟೆಂಡೆಂಟ್ ನಿಮಿತ್ ಗೋಯಲ್ ಮಾಹಿತಿ ನೀಡಿದ್ದಾರೆ.
ಹಿಂದಿನಿಂದ ಬಂದು ತಲೆ ಕತ್ತರಿಸಿದ : ಬಾಲಕ ಹಾಗೂ ಅವನ ತಾಯಿಗೆ ಯುವತಿ ಚಹಾ ತಯಾರಿಸುವಾಗ ಬಾಲಕ ಆಕೆ ಹಿಂದೆಯೇ ಅಡುಗೆ ಮನೆಗೆ ಹೋಗಿ ತನ್ನ ಸಹೋದರಿಯನ್ನು ಶಿರಚ್ಛೇದ ಮಾಡಿದ್ದಾನೆ. ನಂತರ ಅವನು ತನ್ನ ತಾಯಿ ಜೊತೆ ಆ ತಲೆ ಇಟ್ಟುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾನೆ.
ಆತನ ಸೆಲ್‌ಫೋನ್ ವಶಪಡಿಸಿಕೊಳ್ಳಲಾಗಿದೆ. ಆ ಚಿತ್ರವನ್ನು ಅಳಿಸಿ ಹಾಕಿದ್ದಾರೆ, ಚಿತ್ರವನ್ನು ಮರುಪಡೆಯಲು ನಾವು ಫೋರೆನ್ಸಿಕ್ ವಿಶ್ಲೇಷಣೆಗಾಗಿ ಸೆಲ್‌ಫೋನ್ ಕಳುಹಿಸುತ್ತೇವೆ. ಇದು ನಿರ್ಣಾಯಕ ಸಾಕ್ಷಿಯಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಮಗಳ ಮೇಲೆ ಭಾರೀ ಕೋಪವಿತ್ತು : ಓಡಿಹೋಗಿ ಮದುವೆಯಾಗಿದ್ದ ತಮ್ಮ ಮಗಳ ಮೇಲೆ ತಾಯಿ ಹಾಗೂ ಆತನ ತಮ್ಮ ತೀವ್ರ ಕೋಪಗೊಂಡಿದ್ದರಂತೆ. ಇನ್ನು ವಿವಾಹವಾದ ಯುವತಿ ಮತ್ತು ಆಕೆಯ ಪ್ರಿಯತಮ ಜೂನಿಯರ್ ಕಾಲೇಜಿನಲ್ಲಿ ಒಟ್ಟಿಗೆ ಇದ್ದಾಗ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯಾವಾಗ ಮದುವೆ ಆಗಿತ್ತು? : ಘಟನೆ ಸಂಬಂಧ ವೈಜಾಪುರದ ಉಪವಿಭಾಗದ ಪೊಲೀಸ್ ಅಧಿಕಾರಿ ಕೈಲಾಶ್ ಪ್ರಜಾಪತಿ ಮಾತನಾಡಿ, ಗೋಯೆಗಾಂವ್ ಗ್ರಾಮದ ನಿವಾಸಿಯಾಗಿರುವ 19 ವರ್ಷದ ಯುವತಿ ಜೂನ್‌ನಲ್ಲಿ 20 ವರ್ಷದ ಯುವಕನೊಂದಿಗೆ ಓಡಿ ಹೋಗಿದ್ದಳು. ಆಕೆಯ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು.
ಸುಮಾರು ಎಂಟು ದಿನಗಳ ನಂತರ, ಜೂನ್ 21ರಂದು ಅವಳು ತನ್ನ ಮದುವೆಯನ್ನು ನೋಂದಾಯಿಸಿಕೊಂಡಿದ್ದಾಳೆ. ನಂತರ ಅವರು ವೈಜಾಪುರ ಪೊಲೀಸ್ ಠಾಣೆಗೆ ತಿರುಗಿದ್ದರು. ಅಂದಿನಿಂದ ಅವಳು ತನ್ನ ಪತಿಯೊಂದಿಗೆ ಲಡ್ಗಾಂವ್‌ನಲ್ಲಿ ವಾಸಿಸುತ್ತಿದ್ದಳು ಎಂದಿದ್ದಾರೆ.
ಪೂರ್ವನಿಯೋಜಿತ ಕೊಲೆ : ಇದು ಅಂತರ್ಜಾತಿ ವಿವಾಹವಲ್ಲದಿದ್ದರೂ ಸಹ ಕುಟುಂಬಕ್ಕೆ ಕಳಂಕ ತರಲಾಗಿತ್ತು ಎಂದು ಹುಡುಗ ಮತ್ತು ಅವನ ತಾಯಿ ಆಕೆಯನ್ನು ದೂಷಿಸಿದ್ದರು. ಇದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯ ತಾಯಿ ಸುಮಾರು 10 ದಿನಗಳ ಹಿಂದೆ ಆಕೆಯನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಳಂತೆ.
ಆಗ ಅವಳನ್ನು ತಬ್ಬಿಕೊಂಡು ತುಂಬಾ ಅತ್ತಿದ್ದಳಂತೆ. ನಂತರ ಆಕೆ ಹೆಚ್ಚು ಮಾತನಾಡದೆ ಹೊರಟು ಹೋಗಿ ಇದಾದ ನಂತರ ಭಾನುವಾರ ತನ್ನ ಮಗನನ್ನು ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಘಟನೆಯ ಸಮಯದಲ್ಲಿ ಮಹಿಳೆಯ ಪತಿ ಬೇರೆ ಕೋಣೆಯಲ್ಲಿದ್ದ ಎನ್ನಲಾಗಿದೆ. ಆದರೆ, ಇವರಿಬ್ಬರಿಗೆ ಯುವತಿ ಚಹಾ ತಯಾರಿಸಲು ಅಡುಗೆಮನೆಗೆ ಹೋದಾಗ ಈ ಕೃತ್ಯ ನಡೆದಿದೆ.