ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ದ್ವೇಷದ ರಾಜಕೀಯ ಆರಂಭಗೊಂಡಿದ್ದು, ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ರಾಜ್ಯದ ವಿವಿಧ ನಗರದಲ್ಲಿರುವ ಟಿಡಿಪಿ ಕಚೇರಿಗಳ ಮೇಲೆ ಹಲ್ಲೆ ಮಾಡಿ ಧ್ವಂಸ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಮುಖವಾಗಿ ಆಂಧ್ರಪ್ರದೇಶದ ಗುಂಟೂರು, ವಿಜಯವಾಡ, ಮಂಗಳಗಿರಿ ಸೇರಿದಂತೆ ಅನೇಕ ಜಿಲ್ಲೆಯ ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಘಟನೆ ವೇಳೆ ಪಕ್ಷದ ವಕ್ತಾರ ಪಟ್ಟಾಭಿ ರಾಮ್ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಚಂದ್ರಬಾಬು ನಾಯ್ಡು
ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ವೈಎಸ್ಆರ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟಿಡಿಪಿ ಪ್ರಧಾನ ಕಚೇರಿ ಮೇಳೆ ದಾಳಿ ನಡೆಸಿದಿರುವುದ ನಿಜಕ್ಕೂ ಆಘಾತಕಾರಿ. ಸಿಎಂ ಜಗನ್ ಆಮಿಷವೊಡ್ಡಿ ಇಂತಹ ಕೆಲಸ ಮಾಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದ್ದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ದಾಳಿಗಳು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗಳು. ಇದೇ ವಿಚಾರವಾಗಿ ನಾವು ಬುಧವಾರ ಆಂಧ್ರಪ್ರದೇಶ ಬಂದ್ಗೆ ಕರೆ ನೀಡಿದ್ದೇವೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ಚಂದ್ರಬಾಬು ನಾಯ್ಡು ಕರೆ ನೀಡಿದರು.