ದರ್ಭಂಗಾ(ಬಿಹಾರ) : ದೇಶಾದ್ಯಂತ ಸುದ್ದಿಯಾಗಿರುವ ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಸಂಬಂಧ ಎಟಿಎಸ್ ತಂಡ ಹಾಗೂ ದೆಹಲಿ ಪೊಲೀಸರು ಭದ್ರತಾ ಲೋಪ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಕರೆಯಲಾದ ಲಲಿತ್ ಝಾ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ದರ್ಭಂಗಾದ ಬಹೇರಾ ಜಿಲ್ಲೆಯ ರಾಂಪುರ ಉದಯ ಗ್ರಾಮಕ್ಕೆ ಸೋಮವಾರ ಸಂಜೆ ಎಟಿಎಸ್ ತಂಡ ಭೇಟಿ ಆಗಮಿಸಿ ಪರಿಶೀಲನೆ ನಡೆಸಿದೆ. ಜೊತೆಗೆ ಮಂಗಳವಾರ ದೆಹಲಿ ಪೊಲೀಸರು ಕೂಡ ಲಲಿತ್ ಝಾ ಮನೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.
ಎಟಿಎಸ್ ಮತ್ತು ದೆಹಲಿ ಪೊಲೀಸರಿಂದ ತನಿಖೆ : ಪ್ರಕರಣ ಪ್ರಮುಖ ಆರೋಪಿ ಲಲಿತ್ ಝಾ ಅವರ ತಂದೆ ತಾಯಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಲಿತ್ ಝಾ ತಂದೆ ದೇವಾನಂದ್ ಝಾ, ತಾಯಿ ಮಂಜುಳಾ ಝಾ, ಸಹೋದರರಾದ ಹರಿದರ್ಶನ್ ಝಾ ಮತ್ತು ಶಂಭು ಝಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸೋಮವಾರ ಇಬ್ಬರು ಎಟಿಎಸ್ ಅಧಿಕಾರಿಗಳು ಲಲಿತ್ ಝಾ ಮನೆಗೆ ಭೇಟಿ ನೀಡಿದ್ದರು ಎಂದು ಬಹೇರಾ ಪೊಲೀಸ್ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ : ಇಬ್ಬರು ಎಟಿಎಸ್ ಅಧಿಕಾರಿಗಳು ಝಾ ಕುಟುಂಬ ಸದಸ್ಯರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಲಿತ್ ಝಾ ಕುರಿತ ಹಲವು ಮಾಹಿತಿಗಳನ್ನು ಕುಟುಂಬ ಸದಸ್ಯರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಲಿತ್ ಯಾವಾಗ ಊರಿಗೆ ಬಂದು ಹೋಗುತ್ತಿದ್ದರು , ಏನೆಲ್ಲ ಕೆಲಸ ಮಾಡುತ್ತಿದ್ದರು ಎಂದೆಲ್ಲ ಮಾಹಿತಿ ಕಲೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಝಾ ತಂದೆ ದೇವಾನಂದ್ ಝಾ, ಎಟಿಎಸ್ ತಂಡ ನನ್ನ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ವಿಚಾರಣೆ ನಡೆಸಿದೆ. ಲಲಿತ್ ಝಾ ಸಹೋದರರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಲಲಿತ್ ಝಾ ಯಾವಾಗ ಊರಿಗೆ ಬಂದು ಹೋಗುತ್ತಿದ್ದರು. ಲಲಿತ್ ಝಾ ಕುರಿತ ಹಲವು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಹೇಳಿದರು.
ಲಲಿತ್ ಝಾ ಕೃತ್ಯದಿಂದಾಗಿ ಕುಟುಂಬದ ಸದಸ್ಯರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಲಲಿತ್ ಹೆಸರು ಕೇಳಿ ಬಂದಾಗಿನಿಂದ ನಮಗೆ ಮನೆಯಿಂದ ಹೊರಗಡೆ ತೆರಳಲು ಸಾಧ್ಯವಾಗುತ್ತಿಲ್ಲ. ಹಲವರು ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಕೋಲ್ಕತ್ತಾಗೆ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಲಲಿತ್ ಝಾ ತಂದೆ ದೇವಾನಂದ್ ಝಾ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಹೇರಾ ಪೊಲೀಸ್ ಠಾಣೆ ಅಧಿಕಾರಿ, ಎಟಿಎಸ್ ತಂಡ ಲಲಿತ್ ಝಾ ತಂದೆ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇಂದು ದೆಹಲಿ ಪೊಲೀಸರು ರಾಂಪುರ್ ಉದಯ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣ: ಘಟನೆ ಬಗ್ಗೆ ಪ್ರಧಾನಿ ಮೌನ ಮುರಿಯುವಂತೆ ಚೌಧರಿ ಒತ್ತಾಯ