ಮುಂಬೈ: ಎಟಿಎಂಗೆ ಹೋಗಿ 500 ರೂಪಾಯಿ ವಿತ್ಡ್ರಾ ಮಾಡಿದಾಗ ಅದರ ಬದಲು 2,500 ಸಾವಿರ ಬಂದರೆ ಹೇಗಿರುತ್ತೆ! ಇದು ಅಸಾಧ್ಯವಾದರೂ ಮಹಾರಾಷ್ಟ್ರದ ಎಟಿಎಂ ಕೇಂದ್ರದಲ್ಲಿ ನಿಜವಾಗಿದೆ.
ನಾಗ್ಪುರ ಜಿಲ್ಲೆಯ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕೊಂದರ ಎಟಿಎಂನಲ್ಲಿ ಈ ವಿಚಿತ್ರ ವಿದ್ಯಮಾನ ಇಂದು ಘಟಿಸಿದೆ. ಗ್ರಾಹಕನೊಬ್ಬ 500 ರೂ. ಪಡೆದುಕೊಳ್ಳಲು ಎಟಿಎಂನಲ್ಲಿ ದಾಖಲಿಸಿದ್ದಾನೆ. ಈ ವೇಳೆ ಆಶ್ಚರ್ಯ ಎಂಬಂತೆ 500 ರ ಒಂದು ನೋಟಿನ ಬದಲು 5 ನೋಟುಗಳು ಬಂದಿವೆ.
ಮತ್ತೆ ಆ ವ್ಯಕ್ತಿ ಅದೇ ರೀತಿ ಮಾಡಿದ್ದಾನೆ. ಆಗಲೂ 5 ನೋಟು(2,500 ರೂ.) ಬಂದಿವೆ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದೆ. ತಕ್ಷಣವೇ ಜನರು ಎಟಿಎಂನಲ್ಲಿ ಹಣ ಹಿಂಪಡೆಯಲು ಮುಗಿಬಿದ್ದಿದ್ದಾರೆ.
ಬ್ಯಾಂಕ್‌ನ ಗ್ರಾಹಕರೊಬ್ಬರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ಇದ್ದ ಸ್ಥಳಕ್ಕೆ ಬಂದ ಪೊಲೀಸರು ವ್ಯವಹಾರವನ್ನು ಬಂದ್ ಮಾಡಿದ್ದಾರೆ. ನಂತರ ಘಟನೆಯ ಬಗ್ಗೆ ಬ್ಯಾಂಕ್ಗೆ ಮಾಹಿತಿ ರವಾನಿಸಲಾಗಿದೆ.
ಏನಾಗಿತ್ತು: ಸ್ಥಳಕ್ಕೆ ಬಂದ ಬ್ಯಾಂಕ್ ಸಿಬ್ಬಂದಿ ಎಟಿಎಂ ಅನ್ನು ಪರಿಶೀಲನೆ ಮಾಡಿದಾಗ ಆದ ಅಚಾತುರ್ಯ ಗೊತ್ತಾಗಿದೆ. ಅದೇನಾಗಿತ್ತು ಅಂದರೆ, 100 ರೂಪಾಯಿಯ ಟ್ರೇನಲ್ಲಿ 500 ರೂ. ನೋಟುಗಳನ್ನು ತಪ್ಪಾಗಿ ಹಾಕಿದ್ದರಿಂದ ಹಣ ಹೆಚ್ಚುವರಿಯಾಗಿ ಹೋಗಿದೆ. ನಡೆದ ಅಚಾತುರ್ಯವನ್ನು ಪತ್ತೆ ಮಾಡುವುದರೊಳಗೆ ಅದೆಷ್ಟೋ ಜನರು ಹಣವನ್ನು ಪಡೆದುಕೊಂಡಿದ್ದು, ಅಂತಹವರನ್ನು ಪತ್ತೆ ಮಾಡಲು ಅಧಿಕಾರಿಗಳು ನಿರತರಾಗಿದ್ದಾರೆ.
ಇದನ್ನೂ ಓದಿ: ದೇಶದಲ್ಲೇ ಅತಿ ದೊಡ್ಡ ಚಿಟ್ಟೆ ರಾಧಾನಗರಿಯಲ್ಲಿ ಪತ್ತೆ!