ಮುಂಬೈ (ಮಹಾರಾಷ್ಟ್ರ): ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಗ್ಗೂಡಬೇಕು, ಐಕ್ಯತೆ ಕಾಪಾಡಿಕೊಳ್ಳಬೇಕು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ನಿನ್ನೆ ರಾಷ್ಟ್ರೀಯ ಕಾಂಗ್ರೆಸ್ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ 19 ವಿರೋಧ ಪಕ್ಷಗಳ ಸಭೆ ನಡೆದಿದ್ದು, ಇದರ ಬೆನ್ನಲ್ಲೇ ಸಂಜಯ್ ರಾವತ್ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳಿಗೆ ಹೀಗೆ ಕರೆ ನೀಡಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಭಾಗಿಯಾಗಿದ್ದರು. ನಮ್ಮೊಂದಿಗೆ ಇಂದು ಅಧಿಕಾರವಿಲ್ಲ. ಆದರೆ, ಇಂದು ನಾವು ಒಟ್ಟಿಗೆ ಸೇರಿದ್ದೇವೆ. ನಾವು ಅಧಿಕಾರಕ್ಕೆ ಬಂದ ಬಳಿಕವೂ ನಾವೆಲ್ಲರೂ ಒಟ್ಟಾಗಿರಬೇಕು (ಬಿಜೆಪಿ ವಿರುದ್ಧ) ಎಂದು ರಾವತ್ ಹೇಳಿದರು.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಠಕ್ಕರ್ ಕೊಡಲು ವಿಪಕ್ಷಗಳು ಸಜ್ಜು.. ಪ್ರತಿಪಕ್ಷಗಳಿಗೆ ಸೋನಿಯಾ ಕೊಟ್ಟ ಸಲಹೆಗಳೇನು?
ಇದೇ ವೇಳೆ, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಮಾತನಾಡಿದ ರಾವತ್, ತಾಲಿಬಾನ್ ಬೆಳೆಯುತ್ತಿರುವುದು ನಿಜ. ಪಾಕಿಸ್ತಾನ ಮತ್ತು ಚೀನಾದ ಬೆಂಬಲವನ್ನು ತಾಲಿಬಾನ್ ಹೊಂದಿದೆ. ಹಾಗಾಗಿ ಭಾರತ ಸರ್ಕಾರವು ಈ ಶತ್ರು ರಾಷ್ಟ್ರಗಳಿಗೆ ತಮ್ಮ ಸ್ಥಾನವೇನೆಂಬುದನ್ನ ತೋರಿಸಬೇಕು ಎಂದರು.