ಶಿಲ್ಲಾಂಗ್/ ಕೊಹಿಮಾ: ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ನಿಗದಿತ ಸಮಯದ ವೇಳೆಗೆ ಕ್ರಮವಾಗಿ 74.32% ಮತ್ತು 82.42% ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಎರಡೂ ಈಶಾನ್ಯ ರಾಜ್ಯಗಳಿಗೆ ಒಂದೇ ಹಂತದ ಮತದಾನ ನಡೆದಿದ್ದು, ಸುಮಾರು 33 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.
ಮೇಘಾಲಯದಲ್ಲಿ ಒಟ್ಟು 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಮತದಾನವಾಗಿದೆ. 12 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಮುನ್ನವೇ ಪುರುಷ, ಮಹಿಳೆಯರು ಮತ್ತು ಮೊದಲ ಬಾರಿಗೆ ಮತದಾರರು ಸೇರಿದಂತೆ ವಿವಿಧ ವಯೋಮಾನದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ಈವರೆಗೂ ಯಾವುದೇ ಅಹಿತಕರ ಘಟನೆಗಳ ಬಗ್ಗೆ ವರದಿ ಬಂದಿಲ್ಲ. ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ತಾಂತ್ರಿಕ ದೋಷ ಉಂಟಾಗಿ ಮತದಾನಕ್ಕೆ ಅಡ್ಡಿಯಾಗಿತ್ತು ಎಂದು ಮೇಘಾಲಯ ಮುಖ್ಯ ಚುನಾವಣಾ ಅಧಿಕಾರಿ ಖಾರ್ಕೊಂಗೊರ್ ತಿಳಿಸಿದರು.
13 ರಾಜಕೀಯ ಪಕ್ಷಗಳ ಸೆಣಸಾಟ: ರಾಜ್ಯದಲ್ಲಿ 36 ಮಹಿಳೆಯರು ಸೇರಿದಂತೆ ಒಟ್ಟು 369 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 10.92 ಲಕ್ಷ ಮಹಿಳೆಯರು ಸೇರಿದಂತೆ ಸುಮಾರು 21.75 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ನಾಲ್ಕು ರಾಷ್ಟ್ರೀಯ ಪಕ್ಷಗಳು ಸೇರಿ 13 ರಾಜಕೀಯ ಪಕ್ಷಗಳು ಸೆಣಸಾಟ ನಡೆಸಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ತಲಾ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಪ್ರಮುಖ ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್ 56 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ನೇತೃತ್ವದ ಎನ್‌ಪಿಪಿ 57 ಅಭ್ಯರ್ಥಿಗಳು, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) 46, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 11, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 9, ಗಣ ಸುರಕ್ಷಾ ಪಕ್ಷ 1, ಗರೋ ನ್ಯಾಷನಲ್ ಕೌನ್ಸಿಲ್ 2, ಜನತಾ ದಳ (ಯುನೈಟೆಡ್) 3, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 2, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) 2, ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ 18 ಹುರಿಯಾಳುಗಳನ್ನು ಹೊಂದಿದೆ.
ಇದಲ್ಲದೇ, ಒಟ್ಟು 44 ಸ್ವತಂತ್ರ ಅಭ್ಯರ್ಥಿಗಳೂ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ (ಯುಡಿಪಿ) ಅಭ್ಯರ್ಥಿ ಎಚ್. ಡೊಂಕುಪರ್ ರಾಯ್ ಲಿಂಗ್ಡೋಹ್ ಅವರ ನಿಧನದ ನಂತರ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹಿಯಾಂಗ್ ಅಸೆಂಬ್ಲಿ ಕ್ಷೇತ್ರವೊಂದಕ್ಕೆ ಮತದಾನ ನಡೆದಿಲ್ಲ. ಮತ ಎಣಿಕೆ ಮಾರ್ಚ್ 2 ರಂದು ನಾಗಾಲ್ಯಾಂಡ್ ಮತ್ತು ತ್ರಿಪುರಾದ ಜೊತೆಗೆ ನಡೆಯಲಿದೆ.
ಮೈತ್ರಿ ಸರ್ಕಾರಕ್ಕೆ ಸವಾಲಾಗುತ್ತಾ ಬಿಜೆಪಿ?: ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವ ಎರಡೂ ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ ಹೆಚ್ಚಿನ ಪ್ರಚಾರ ನಡೆಸಿದೆ. ಮತದಾರರ ನಿರ್ಧಾರ ಏನೆಂಬುದು ಮಾರ್ಚ್ 2 ರಂದು ಹೊರಬೀಳಲಿದೆ. ಮುಕ್ತ ಮತ್ತು ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಬಿಗಿ ಭದ್ರತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ.
ನಾಗಾಲ್ಯಾಂಡ್‌ನಲ್ಲಿ ಮುಖ್ಯಮಂತ್ರಿ ನೆಫಿಯು ರಿಯೊ ಅವರು ಕಾಂಗ್ರೆಸ್ ಪಕ್ಷದ ಸೆಯಿವಿಲಿ ಸಚು ಅವರ ಸವಾಲು ಎದುರಿಸಿದ್ದಾರೆ. ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಟಿಎಂಸಿಯ ಮಾಜಿ ಸಿಎಂ ಮುಕುಲ್ ಸಂಗ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಗಳಿಸಿರಲಿಲ್ಲ. ಈ ಸಲ ಸ್ವಂತವಾಗಿ ಬಹುಮತ ಗಳಿಸುವ ಉತ್ಸಾಹವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.
ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸೇರಿದಂತೆ ಬಿಜೆಪಿಯ ಮೊದಲ ಪಂಕ್ತಿಯ ನಾಯಕರು ಪ್ರಚಾರ ನಡೆಸಿದ್ದರು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರೂ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.
ಇದನ್ನೂ ಓದಿ: ಭಾರತದಲ್ಲಿ ಪ್ರತಿದಿನ 4 ಲಕ್ಷ ಸೈಬರ್ ಅಟ್ಯಾಕ್: ವರದಿಯಲ್ಲಿ ಬಹಿರಂಗ