ನವದೆಹಲಿ: ಕೋವಿಡ್ ಹಾವಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಪ್ರಚಾರ ಸಂಬಂಧ ವಿಧಿಸಿದ್ದ ನಿಯಮಗಳಲ್ಲಿ ಸಡಿಲಿಕೆ ಮಾಡಿ ಚುನಾವಣಾ ಆಯೋಗ ವಿನಾಯಿತಿ ನೀಡಿದೆ. ರೋಡ್‌ಶೋ, ಪಾದಯಾತ್ರೆ, ಸೈಕಲ್ ಮತ್ತು ವಾಹನಗಳ ಮೂಲಕ ರ್ಯಾಲಿಗಳಿಗೆ ಹೇರಿದ್ದ ನಿರ್ಬಂಧ ಸಡಿಲಗೊಳಿಸಿ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಇಳಿಕೆಯಾದ್ದರಿಂದ ಚುನಾವಣೆ ಹಿನ್ನೆಲೆ ಮುಕ್ತ ಸ್ಥಳಗಳಲ್ಲಿ ಪ್ರಚಾರ ಮಾಡಲು ಅವಕಾಶ ಕಲ್ಲಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಈ ಹೊಸ ವಿನಾಯಿತಿಯಿಂದ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯವಾಗಿದೆ.
ಇದನ್ನೂ ಓದಿ: ಒಂದು ಲಕ್ಷಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ದಾಖಲು... ಇಂದಿನ ಕೊರೊನಾ ವರದಿ
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಂದು ನಡೆಯಲಿದೆ. ಈ ಹಿನ್ನೆಲೆ ಫೆ.8ರ ಸಂಜೆ ಪ್ರಚಾರಗಳಿಗೆ ಬ್ರೇಕ್ ಬೀಳಲಿದೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಅದರ ಮೇಲ್ವಿಚಾರಕರು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಭೌತಿಕ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗವು ಅನುಮತಿ ನೀಡಿದೆ.
ಮುಕ್ತ ಸಭೆಗಳು, ಹಾಲ್ಗಳಲ್ಲಿ ಸಭೆ ಮತ್ತು ರ್ಯಾಲಿ, ಕೂಟಗಳಿಗೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಒಳಗಾಂಣದಲ್ಲಿ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಮತ್ತು ತೆರೆದ ಮೈದಾನದಲ್ಲಿ ಶೇ.30 ರಷ್ಟು ಜನರಿಗೆ ಮಾತ್ರ ಅವಕಾಶವಿದೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಇದರ ಹೊರತಾಗಿ, ಮನೆ-ಮನೆ ಪ್ರಚಾರಕ್ಕೆ ಗರಿಷ್ಠ 20 ಜನರ ಮಿತಿ ಮೊದಲಿನಂತೆಯೇ ಇರುತ್ತದೆ. ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಪ್ರಚಾರ ಮಾಡದಂತೆ ನಿಷೇಧ ಹೇರಲಾಗಿದೆ.